ಯುನಿವೆಫ್ಎಜುಕೇಶನ್ ಫೋರಂ ಮಂಗಳೂರು ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ
ಮಂಗಳೂರು: ಯುನಿವೆಫ್ ಎಜುಕೇಶನ್ ಫೋರಂ ಮಂಗಳೂರು ಶಾಖೆಯ ವತಿಯಿಂದ 2023-24 ರ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 90%ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಮಂಗಳೂರು ವ್ಯಾಪ್ತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸುವ ಕಾರ್ಯಕ್ರಮ ಅಡ್ಯಾರ್ ನ ಬರಕಾ ಇಂಟರ್ನ್ಯಾಶನಲ್ ಸ್ಕೂಲ್ ಮತ್ತು ಕಾಲೇಜ್ ನಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುನಿವೆಫ್ ಎಜುಕೇಶನ್ ಫೋರಂ ಸಂಚಾಲಕ ಯು. ಕೆ. ಖಾಲಿದ್ ರವರು ಮಾತನಾಡಿ "ನಾವು ವ್ಯವಸ್ಥೆಯ ಭಾಗವಾಗದೆ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ದೇಶದ ರಾಜಕೀಯ, ಸಾಮಾಜಿಕ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಸಮುದಾಯದ ಪ್ರಾತಿನಿಧ್ಯ ಹೆಚ್ಚಳವೇ ನಮ್ಮ ಪ್ರಸಕ್ತ ಸಮಸ್ಯೆಗಳಿಗೆ ಪರಿಹಾರ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಪ್ರತಿಯೊಬ್ಬರೂ ಬದಲಾವಣೆಗಾಗಿ ಶಿಕ್ಷಿತರಾಗಬೇಕು." ಎಂದು ಹೇಳಿದರು. ಬರಕಾ ಇಸ್ಲಾಮಿಕ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಜನಾಬ್ ಮುಹಮ್ಮದ್ ಹನೀಫ್ ಯುನಿವೆಫ್ ಎಜುಕೇಶನ್ ಫೋರಂ ನ ಚಟುವಟಿಕೆಗಳನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಹಿತವಚನವನ್ನು ಬೋಧಿಸಿದರು.
ನೌಫಲ್ ಹಸನ್ ರವರ ಕಿರಾಅತ್ ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶೇಖ್ ಹಫೀಝ್ ಅಹ್ಮದ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಅತೀಕುರ್‍ರಹ್ಮಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷೀಯ ಭಾಷಣ ಮಾಡಿದ ಉಬೈದುಲ್ಲಾ ಬಂಟ್ವಾಳ ಅವರು, ಯುನಿವೆಫ್ ಎಜುಕೇಶನ್ ಫೋರಂ ನ ಆಶಯ ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಕಾಲೇಜಿನ ನಿರ್ದೇಶಕ ಮುಹಮ್ಮದ್ ಅಯಾನ್, ಪ್ರಾಂಶುಪಾಲೆ ಫಾತಿಮತುಲ್ ಅಶೂರಾ ಮತ್ತು ಉಪಪ್ರಾಂಶುಪಾಲೆ ಸೌಶ್ರೀನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಿಸಿದ ಬರಕಾ ಇಂಟರ್ನ್ಯಾಶನಲ್ ಶಾಲೆಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಹಾಗೂ ಉತ್ತಮ ಫಲಿತಾಂಶ ದಾಖಲಿಸಲು ಕಾರಣಕರ್ತರಾದ ಆ ಶಾಲೆಯ ಪ್ರಾಂಶುಪಾಲರನ್ನೂ, ಅಧ್ಯಾಪಕರನ್ನೂ ಸನ್ಮಾನಿಸಲಾಯಿತು.