ಮೀಸಲಾತಿ, ಒಳ ಮೀಸಲಾತಿಗೆ ಸುನ್ನೀ ಸಂಘಟನೆಗಳ ಆಗ್ರಹ
ಕಾವಲಕಟ್ಟೆ: ಕರ್ನಾಟಕದಲ್ಲಿ ಮುಸ್ಲಿಮರಿಗಿದ್ದ 4% ಮೀಸಲಾತಿಯನ್ನು ರದ್ದುಪಡಿಸಿ ಹಿಂದಿನ ಸರ್ಕಾರವು ಕೈಗೊಂಡಿದ್ದ ನಿರ್ಣಯವನ್ನು ಹಿಂದೆಗೆದು ರಾಜ್ಯ ಸರ್ಕಾರವು ಮುಸ್ಲಿಂ ಮೀಸಲಾತಿಯನ್ನು ಪುನಃಸ್ಥಾಪಿಸಲು ಮುಂದಾಗಬೇಕು ಮತ್ತು ಮೀಸಲಾತಿ ಪ್ರಮಾಣವನ್ನು ಶೇಕಡಾ 7ಕ್ಕೆ ಏರಿಸಬೇಕು. ಅದೇ ರೀತಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಒಳ ಮೀಸಲಾತಿ ಒದಗಿಸಬೇಕು. ಆ ಮೂಲಕ ಮುಸ್ಲಿಮರ ರಾಜಕೀಯ ಸಬಲೀಕರಣಕ್ಕೆ ಸಹಕರಿಸಬೇಕು ಎಂದು ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳ ಜಂಟಿ ಸಭೆಯು ಆಗ್ರಹಿಸಿದೆ.
ಕಾವಲಕಟ್ಟೆ ಅಲ್ ಖಾದಿಸಾದಲ್ಲಿ ನಡೆದ ಸುನ್ನೀ ಸಂಘಟನೆಗಳ ಜಂಟಿ ಸಭೆಯಲ್ಲಿ ಸುನ್ನೀ ಜಂಇಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂ ಸುಫ್ಯಾನ್ ಮದನಿ ಉದ್ಘಾಟಿಸಿದರು. ಎನ್ ಕೆ ಎಂ ಶಾಫಿ ಸಅದಿ, ಡಾ. ಎಮ್ಮೆಸ್ಸಂ ಝೈನಿ ಕಾಮಿಲ್, ಅಬ್ದುಲ್ ಹಮೀದ್ ಬಜ್ಪೆ, ಸಿದ್ದೀಖ್ ಕೆ ಎಂ ಮೊಂಟುಗೋಳಿ, ಎಂಬಿಎಂ ಸಾದಿಕ್ ಮಲೆಬೆಟ್ಟು, ಅಶ್ರಫ್ ಕಿನಾರ ಚರ್ಚೆ ಮಂಡಿಸಿದರು.
ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಹಿಂದಿನ ಸರ್ಕಾರ ನೀಡಿದ್ದ ಆದೇಶವು ನ್ಯಾಯಾಲಯ ದಲ್ಲಿದ್ದು, ಹಾಲಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ಇನ್ನೂ ಅದನ್ನು ಹಿಂದೆಗೆದು ಕೊಂಡಿಲ್ಲ. ಪ್ರಸ್ತುತ ಆದೇಶ ವನ್ನು ಸರ್ಕಾರವು ಕೂಡಲೇ ಹಿಂದೆಗೆಯಬೇಕು ಎಂದೂ ಆಗ್ರಹಿಸಿದ ಜಂಟಿ ಸಭೆಯು, ಕೇಂದ್ರ ಸರ್ಕಾರದ ವಿವಾದಾತ್ಮಕ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಎಲ್ಲ ಮುಸ್ಲಿಮರು ಜೆಪಿಸಿಗೆ ಮನವಿ ಸಲ್ಲಿಸಬೇಕು ಎಂದು ಕರೆ ನೀಡಿದೆ.
ಸಯ್ಯಿದ್ ಶಾಫೀ ನಈಮಿ ಮಾರ್ನಳ್ಳಿ, ಸುನ್ನೀ ಯುವಜನ ಸಂಘ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಮಡಿಕೇರಿ, ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ, ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಜಿ.ಎಂ. ಕಾಮಿಲ್ ಸಖಾಫಿ ಸ್ವಾಗತಿಸಿ, ವಂದಿಸಿದರು.