ಸುರತ್ಕಲ್: ಆಟಿದ ಪೊರ್ಲು, ಅಭಿನಂದನಾ ಕಾರ್ಯಕ್ರಮ

Update: 2023-08-13 17:03 GMT

ಸುರತ್ಕಲ್: ಬಂಟರ ಸಂಘ ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಸಹಯೋಗದಲ್ಲಿ ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ ರವಿವಾರ ಬಂಟರ ಸಂಘದ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ, ಆಟಿ ತಿಂಗಳು ತುಳುವರಲ್ಲಿ ಅತ್ಯಂತ ಭಿನ್ನವಾದುದು. ನಮ್ಮ ಪೂರ್ವಜರು ಆಟಿ ತಿಂಗಳನ್ನು ಕಷ್ಟದಿಂದ ಕಳೆಯುತ್ತಿದ್ದರು. ಇಂದಿನ ಕಾಲದಲ್ಲೂ ಯುವಜನತೆ ಆಟಿ ತಿಂಗಳ ಆಚರಣೆ, ಸಂಪ್ರದಾಯವನ್ನು ಮರೆಯದೆ ಇರುವುದು ಶ್ಲಾಘನೀಯ ಎಂದರು.

ಬಳಿಕ ಮಾತಾಡಿದ ಶಾಸಕ ಉಮಾನಾಥ್ ಕೋಟ್ಯಾನ್ ಅವರು, ಆಟಿ ತಿಂಗಳ ಕಷ್ಟ, ವಿಶೇಷವಾದ ತಿಂಡಿ ತಿನಿಸು, ನಮ್ಮ ಹಿರಿಯರ ನೆನಪು ಎಲ್ಲವೂ ಸದಾ ನೆನಪಲ್ಲಿ ಉಳಿಯುವಂತದ್ದು. ಅದನ್ನು ಇಂದು ಮಾತ್ರವಲ್ಲ ಮುಂದಿನ ಪೀಳಿಗೆಯ ಮಕ್ಕಳೂ ಕೂಡಾ ತಿಳಿಯುವಂತಾಗಬೇಕು. ಆಟಿ ತಿಂಗಳ ತುಳುನಾಡಿನ ಆಚರಣೆಗಳು ಮುಂದಿನ ತಲೆಮಾರಿಗೂ ಹೀಗೆಯೇ ಉಳಿಯಬೇಕು ಎಂದರು.

ರಾಜ್ಯ ಸರಕಾರ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಬಂಟ ಸಮಾಜಕ್ಕೆ 250 ಕೋಟಿ ರೂ ಮೀಸಲಿಟ್ಟಿದೆ. ಸಮಾಜದ ಪ್ರಮುಖರು ಬಂಟ ನಿಗಮ ಸ್ಥಾಪನೆಗೆ ಒತ್ತಾಯಿಸಬೇಕಾದ ಅಗತ್ಯವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ವೇದಿಕೆಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಎ. ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, ಬಿರುದು, ಸನ್ಮಾನದಿಂದ ಜವಾಬ್ದಾರಿ ಹೆಚ್ಚುತ್ತದೆ ಎನ್ನುವುದು ನನ್ನ ಭಾವನೆ. ನನ್ನನ್ನು ಇಲ್ಲಿಗೆ ಕರೆಸಿ ಗೌರವಿಸಿದ ಸುರತ್ಕಲ್ ಬಂಟರ ಸಂಘಕ್ಕೆ ಚಿರಋಣಿಯಾಗಿ ದ್ದೇನೆ. ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಂಘಟನೆ ಇನ್ನಷ್ಟು ಬೆಳೆದು ಹೆಮ್ಮರವಾಗಲಿ ಎಂದರು.

ಆಟಿ ಆಚರಣೆ ಕುರಿತು ಉಪನ್ಯಾಸಕಿ ಜಯಲಕ್ಷ್ಮಿ ಆರ್. ಶೆಟ್ಟಿ ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಪ್ರಭಾರ ಮುಖ್ಯಸ್ಥೆ ಡಾ. ಸಾಯಿಗೀತಾ ಹೆಗ್ಡೆ, ಪತ್ರಕರ್ತ ಹಿರಿಯ ರಂಗಕರ್ಮಿ ಪರಮಾನಂದ ಸಾಲ್ಯಾನ್, ಸಂಗೀತ ನಿರ್ದೇಶಕ ಸತೀಶ್ ಸುರತ್ಕಲ್, ಸಮಾಜ ಸೇವಕ ಅಬ್ದುಲ್ ಅಝೀಝ್ ಸುರತ್ಕಲ್, ಕೃಷಿಕ ವೆಂಕಟೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಡಾ. ಎ. ಸದಾನಂದ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಪೂಂಜಾ, ಮಾಜಿ ಅಧ್ಯಕ್ಷ ಎಂ. ದೇವಾನಂದ ಶೆಟ್ಟಿ, ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪನ್ಯಾಸಕಿ ಜಯಲಕ್ಷ್ಮಿ ಆರ್. ಶೆಟ್ಟಿ, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ., ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯ ಎ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕು ನೀಡಿ: ಐಕಳ ಹರೀಶ್ ಶೆಟ್ಟಿ

ಬಂಟರ ಸಮಾಜ ಬೇರೆ ಸಮಾಜಕ್ಕೆ ಮಾದರಿಯಾಗಿ ಬೆಳೆದಿದೆ. ನಾವು ಬಂಟ ನಿಗಮಬೇಕೆಂದು ಕೇಳುತ್ತಲೇ ಬಂದಿದ್ದೇವೆ. ಸದನದಲ್ಲಿ ಪುತ್ತೂರು ಶಾಸಕರು ಕೂಡಾ ಆ ಬಗ್ಗೆ ಧ್ವನಿ ಎತ್ತಿರುವುದು ಸಂತೋಷದ ವಿಷಯ. ಸರಕಾರ ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕು. ಎಲ್ಲಾ ಸಮುದಾಯಕ್ಕೂ ಸಹಾಯ ಹಸ್ತ ಚಾಚುತ್ತಿರುವ ಸಮಾಜ ನಮ್ಮದು ಎಂದ ಅವರು ನಾವೇನು ಭಿಕ್ಷೆ ಬೇಡುತ್ತಿಲ್ಲ, ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ‌ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News