ಸುರತ್ಕಲ್- ಬಿಸಿ ರೋಡ್: ಹೆದ್ದಾರಿ ಗುಂಡಿ ಮುಚ್ಚಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಡಿವೈಎಫ್ಐ ಮನವಿ
ಸುರತ್ಕಲ್, ಜು.19: ಸುರತ್ಕಲ್ ನಿಂದ ಬಿ.ಸಿ. ರೋಡ್ ವರೆಗಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗವು ಬುಧವಾರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿತು.
ಸುರತ್ಕಲ್ ನಿಂದ ಬಿ.ಸಿ. ರೋಡ್ ವರೆಗಿನ ಹೆದ್ದಾರಿಯು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆ ಯಾಗಿದೆ. ಮಾತ್ರವಲ್ಲ ಅಪಾಯಕಾರಿ ಪರಿಸ್ಥಿತಿಯನ್ನು ನಿರ್ಮಿಸಿದೆ. ಹೆದ್ದಾರಿಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಸರಿಯಾದ ನಿರ್ವಹಣೆ ಮಾಡದಿರು ವುದರಿಂದ ಮಳೆಗಾಲದ ಆರಂಭದಲ್ಲೇ ಸುರತ್ಕಲ್ ಟೋಲ್ ಬೂತ್ ಬಳಿಯಿಂದ ಬಿ.ಸಿ. ರೋಡ್ ವರೆಗೂ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದ ಮಾರಣಾಂತಿಕ ಗುಂಡಿಗಳು ಉಂಟಾಗಿವೆ. ಈ ಅಪಾಯಕಾರಿ ಗುಂಡಿಗಳಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿದ್ದು, ದ್ವಿಚಕ್ರ ಸವಾರರಂತೂ ಪ್ರಾಣವನ್ನು ಅಂಗೈನಲ್ಲಿ ಹಿಡಿದು ಸಾಗುವಂತಾಗಿದೆ. ಮಳೆ ಸುರಿಯುವ ಸಂದರ್ಭ ಆಳವಾದ ಈ ಗುಂಡಿಗಳು ಗೋಚರಿಸದೆ ಭೀಕರ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಒಟ್ಟಾರೆ ಈ ಹೆದ್ದಾರಿಯಲ್ಲಿ ಪ್ರಯಾಣ ಮೃತ್ಯುವಿನೊಂದಿಗೆ ಸರಸ ಎಂಬಂತಾಗಿದೆ. ಕೂಳೂರು ನೂತನ ಸೇತುವೆ ನಿರ್ಮಾಣ ಮೂರು ವರ್ಷ ದಾಟಿದರೂ ಪೂರ್ಣಗೊಳ್ಳದೆ ಕಾಮಗಾರಿ ಪೂರ್ತಿಯಾಗಿ ಕುಂಠಿತಗೊಂಡಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಮಂಗಳವಾರ ಪಣಂಬೂರು ಸಮೀಪ ರಸ್ತೆ ನಡುವೆ ದಿಢೀರ್ ಎದುರಾದ ಹೊಂಡ ತಪ್ಪಿಸಲು ಯತ್ನಿಸಿದ ದ್ವಿಚಕ್ರ ವಾಹನ ಸವಾರ ರಸ್ತೆಗೆ ಉರುಳಿ ಬಿದ್ದು ಹಿಂಬದಿಯ ಘನವಾಹನದಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನ, ಕರ್ತವ್ಯಲೋಪವನ್ನು ಎತ್ತಿತೋರಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಅಪಘಾತಕ್ಕೆ ಬಲಿಯಾದ ಸವಾರನ ಕುಟುಂಬಕ್ಕೆ ಹೆದ್ದಾರಿ ಪ್ರಾಧಿಕಾರ ಪರಿಹಾರ ಧನ ಒದಗಿಸಲು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಡಿವೈಎಫ್ಐ ಆಗ್ರಹಿಸಿತು.
ವರ್ಷಕ್ಕೆ ಹತ್ತಾರು ಕೋಟಿ ರೂಪಾಯಿ ಈ ರಸ್ತೆಯ ನಿರ್ವಹಣೆಗಾಗಿ ಹೆದ್ದಾರಿ ಪ್ರಾಧಿಕಾರ ಮೀಸಲಿಡುತ್ತಿದೆ. ಆದರೆ ಗುಣಮಟ್ಟದ ನಿರ್ವಹಣೆ, ಮಳೆಗಾಲಕ್ಕೆ ಮುಂಚಿತವಾಗಿ ದುರಸ್ಥಿಗಳು ನಡೆಯುವುದೇ ಇಲ್ಲ. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡ್ ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಗುಣಮಟ್ಟದ ಕಾಮಗಾರಿಯ ಮೂಲಕ ತಕ್ಷಣವೇ ಮುಚ್ಚಬೇಕು ಎಂದು ಡಿವೈಎಫ್ಐ ನಿಯೋಗವು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.
ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಡಿವೈಎಫ್ಐ ಮುಖಂಡರಾದ ಉಸ್ಮಾನ್ ಕಣ್ಣೂರ್, ಆಸೀಫ್, ರಿಯಾಝ್ ಮುಂತಾದವರು ಉಪಸ್ಥಿತರಿದ್ದರು.