ಸುರತ್ಕಲ್‌ ಜನತಾ ಕಾಲನಿ ಸರಕಾರಿ ಶಾಲೆ, ಆಟದ ಮೈದಾನ ಖಾಸಗಿ ಭೂಮಿ: ಉಪ ತಹಶಿಲ್ದಾರ್‌ ವರದಿಯಲ್ಲಿ ಮಾಹಿತಿ ಬಹಿರಂಗ

Update: 2023-11-28 17:19 GMT

ಸುತತ್ಕಲ್‌, ನ.28: ಜನತಾ ಕಾಲನಿಯಲ್ಲಿರುವ ಶಾಲೆ ಖಾಸಗಿ ನಿವೇಶನದಲ್ಲಿದ್ದು, ಶಾಲೆಗೆ ನೀಡಲಾಗಿದ್ದ ನಿವೇಶನದಲ್ಲಿ ಆಶ್ರಯ ಯೋಜನೆಯ ಮನೆಗಳನ್ನು‌ ನಿರ್ಮಿಸಲಾಗಿದೆ ಎಂದು ಉಪತಹಶೀಲ್ದಾರ್ ಅವರ ವರದಿಯಲ್ಲಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನ‌ ಕಟ್ಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ನಿವೇಶನ ಪರಭಾರೆ ಮಾಡಿರುವ ಕುರಿತು ಶಾಲೆಯ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಪತ್ರ ಬರೆದು ಸರ್ವೇ ಮಾಡಿ ಶಾಲೆಯ ಜಾಗ ಗುರುತಿಸಿ ಕೊಡುವಂತೆ ಮನವಿ‌ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಉಪ ತಹಶೀಲ್ದಾರ್ ನವೀನ್ ಅವರ ನೇತೃತ್ವದ ತಂಡ ಶಾಲೆಯ ಜಾಗವನ್ನು ಸರ್ವೇ ಮಾಡಿ ವರದಿ ತಯಾರಿಸಿದ್ದು, ಜನತಾ ಕಾಲನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸರ್ವೆ ನಂ. 161/1 ಹಾಗೂ 161/2 ಆಗಿದೆ. ಈ ಜಮೀನು ಸರ್ವೇ ನಕ್ಷೆಯು ಖಾಸಗಿಯವರ ಜಮೀನು ಎಂದು ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಶಾಲೆ ಇರುವ ಜಮೀನಿನ ಸರ್ವೆ ನಂ. 161/1ರಲ್ಲಿ 0.45 ಎಕರೆ ಹಾಗೂ 161/2ರಲ್ಲಿ 0.10 ಎಕರೆ ಕೃಷ್ಣಾಪುರ ಮಠಕ್ಕೆ ಸೇರಿದ್ದು, ಇದು ಕೃಷ್ಣದೇವರಾಯರ ಖಾತೆಯಲ್ಲಿದೆ. ಶಾಲೆಯ ಆಟದ ಮೈದಾನವಿರುವ ಸರ್ವೆ ನಂ. 161/1ರಲ್ಲಿ 0.22 ಮತ್ತು 161/2ರಲ್ಲಿ 0.49 ಜೋಗಿ ಮಾಡರವರ ಖಾತೆಯಲ್ಲಿದೆ. ಪ್ರಸ್ತುತ ಈ ಜಾಗವು ಕಮಲ ಶೆಡ್ತಿ ಮತ್ತಿತರರ ಹೆಸರಿನಲ್ಲಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನ‌ ಕಟ್ಲ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಟದ ಮೈದಾನ ಸರ್ವೆ ನಂ. 16 ಆಗಿದ್ದು, ಇಲ್ಲಿ 94ಸಿ ಅಡಿ 13ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

"ಶಾಲೆ ಉಳಿಸಿ ಹೋರಾಟ ಸಮಿತಿ ಆಗ್ರಹ ಹೋರಾಟ ಸಮಿತಿಗೆ ಈ ವರದಿಯ ಮೇಲೆ ನಂಬಿಕೆ ಇಲ್ಲ. ಪ್ರಕರಣದಲ್ಲಿ ಜಿಲ್ಲಾಧಿಕಾರಿ, ಸರಕಾರ ಮಧ್ಯ ಪ್ರವೇಶ ಮಾಡಬೇಕು. ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಗಂಭೀರ ಮತ್ತು ಸಮರ್ಪಕ ತನಿಖೆಯಾಗಬೇಕು. ಶಿಕ್ಷಣ ಇಲಾಖೆ ಈ ಸಂಬಂಧ ಕಾನೂನು ಹೋರಾಟ ಮಾಡಬೇಕು. ಒಂದು ವೇಳೆ ಅಮತಿಮ ವರದಿಯಲ್ಲಿ ಶಾಲೆ ಮತ್ತು ಆಟದ ಮೈದಾನ ಖಾಸಗಿ ಭೂಮಿ ಎಂದಾದಲ್ಲಿ ಸರಕಾರಿ ಮೌಲ್ಯದಂತೆ ಪರಿಹಾರ ನೀಡಿ ಶಾಲೆ ಮತ್ತು ಆಟದ ಮೈದಾನವನ್ನು ಉಳಿಸಿ ಕೊಡಬೇಕು. ಯಾವುದೇ ಕಾರಣಕ್ಕೂ ಶಾಲೆ ಮತ್ತು ಆಟದ ಮೈದಾನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ".

- ಬಿ.ಕೆ. ಇಮ್ತಿಯಾಝ್‌

ಜನತಾ ಕಾಲನಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕ

ಹೋರಾಟ ಸಮಿತಿಯಿಂದ ಶಾಲೆ ಉಳಿಸಿ ಹೋರಾಟ ನಿರಂತರವಾಗಿ ನಡೆಯಲಿದೆ. ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಬಡವರ ಮಕ್ಕಳು ಕಲಿಯುತ್ತಿರುವ ಶಾಲೆ ಮತ್ತು ಅದರ ಆಟದ ಮೈದಾನವನ್ನು ಉಳಿಸಿಕೊಡುವಂತೆ ಜನತಾ ಕಾಲನಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯು ಮಂಗಳವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಲಿದೆ. ಜಿಲ್ಲಾಡಳಿತದ ಸ್ಪಂದನೆಗೆ ಅನುಗುಣವಾಗಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಹೋಟರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ. ‌

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News