ಕೆತ್ತಿಕಲ್ ನಲ್ಲಿ ಭೂ ಮಾಫಿಯಾದ ಶಂಕೆ: ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಆ.2: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಭೂ ಮಾಫಿಯಾದ ವಾಸನೆ ಇದೆ. ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುತ್ತಿದ್ದೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅಪಾಯದ ಅಂಚಿನಲ್ಲಿರುವ ಕೆತ್ತಿಕಲ್ ರಾ.ಹೆದ್ದಾರಿಯಲ್ಲಿ ಗುಡ್ಡವನ್ನು ಶುಕ್ರವಾರ ಬೆಳಗ್ಗೆ ವೀಕ್ಷಣೆ ಮಾಡಿದ ಬಳಿಕ ಸಚಿವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಕೆತ್ತಿಕಲ್ ನಲ್ಲಿ ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು.
ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ಯಾಕೆ ನೀಡಿದೆ ಎಂದು ವರದಿ ಕೇಳುತ್ತೇನೆ ಎಂದು ಸಚಿವರು ತಿಳಿಸಿದರು.