ಸಮಾಜ ಸೇವಕ ಬಾಬು ಪಿಲಾರ್‌ಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿ ಕೈ ಬಿಟ್ಟ ಸರಕಾರ!
ಮಂಗಳೂರು, ನ.1: ಸಮಾಜ ಸೇವೆಯ ಮೂಲಕ ಮನೆ ಮಾತಾಗಿದ್ದ ದ.ಕ.ಜಿಲ್ಲೆಯ ಉಳ್ಳಾಲ ತಾಲೂಕಿನ ಬಾಬು ಪಿಲಾರ್ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟವಾಗಿದ್ದರೂ ಅದರಿಂದ ವಂಚಿತರಾಗಿದ್ದಾರೆ. ಪ್ರಶಸ್ತಿ ಆಯ್ಕೆ ಸಮಿತಿಯ ಎಡವಟ್ಟೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಹಿರಿಯ ಸಮಾಜ ಸೇವಕನಿಗೆ ಅವಮಾನವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರಿನ ಅಧಿಕಾರಿಯೊಬ್ಬರು ನಿನ್ನೆ (ಗುರುವಾರ) ಸಂಜೆ ಪೋನ್ ಕರೆ ಮಾಡಿ ಸುವರ್ಣ ಮಹೋತ್ಸವ ಪ್ರಶಸ್ತಿಗೆ ತಾವು ಆಯ್ಕೆಯಾಗಿದ್ದೀರಿ ಎಂದಿದ್ದರು. ಆವಾಗ ತಾನು ಆಶ್ಚರ್ಯಗೊಂಡೆ. ಅಲ್ಲದೆ ಹೆಸರು ಸರಿಯಾಗಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದೆ. ಅದಕ್ಕೂ ಪ್ರತಿಕ್ರಿಯಿಸಿದ ಆ ಅಧಿಕಾರಿ ಆಯ್ಕೆ ಸಮಿತಿಯು ನಿಮ್ಮ ಹೆಸರನ್ನೇ ಸೂಚಿಸಿದೆ. ನೀವು ಹೊರಟು ಬನ್ನಿ ಎಂದಿದ್ದರು. ಅದರಂತೆ ತಾನು ಗುರುವಾರ ರಾತ್ರಿಯೇ ಮನೆಯಿಂದ ಹೊರಟು ಬಂದಿದ್ದೆ. ಅಲ್ಲದೆ ಬೆಂಗಳೂರಿನ ಕುಮಾರಕೃಪಾ ಸರಕಾರಿ ಅತಿಥಿಗೃಹದಲ್ಲಿ ತನಗೆ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಇಂದು ಬೆಳಿಗ್ಗೆ ತಾನು ಅತಿಥಿಗೃಹ ತಲುಪಿದ್ದೆ. ಮಧ್ಯಾಹ್ನದ ವೇಳೆಗೆ ಇಲಾಖೆಯಿಂದ ಪೋನ್ ಕರೆ ಮಾಡಿದ ವ್ಯಕ್ತಿಯೊಬ್ಬರು, ಹೆಸರು ಅದಲು ಬದಲಾಗಿದೆ. ಬಾಬು ಕಿಲಾರ್ ಎನ್ನುವವರೊಬ್ಬರು ಇದ್ದಾರೆ. ಹಾಗಾಗಿ ನಮ್ಮನ್ನು ಕ್ಷಮಿಸಿ. ಮುಂದಿನ ಬಾರಿ ಪರಿಗಣಿಸಲಾಗುವುದು ಎಂದರು. ಹಾಗಾಗಿ ತಾನು ವಾಪಸ್ ಬರುವಂತಾಗಿದೆ ಎಂದು ಬಾಬು ಪಿಲಾರ್ ʼವಾರ್ತಾಭಾರತಿʼಗೆ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ಮೊನ್ನೆ ಬಿಡುಗಡೆಯಾದ ಪಟ್ಟಿಯಲ್ಲಿ ಬಾಬು ಕಿಲಾರ್ ಎಂಬ ಹೆಸರಿತ್ತು. ಕ್ಷೇತ್ರ ʼಸಂಕೀರ್ಣʼಎಂದಿತ್ತು. ಆದರೆ ಜಿಲ್ಲೆ ಯಾವುದು ಎಂದು ನಮೂದಿಸಿರಲಿಲ್ಲ. ಸಮಾಜ ಸೇವಕ, ಹೋರಾಟಗಾರರೂ ಆಗಿರುವ ಬಾಬು ಪಿಲಾರ್ ಪ್ರಶಸ್ತಿಗಾಗಿ ಅರ್ಜಿ ಹಾಕಿದವರೂ ಅಲ್ಲ. ಗುರುವಾರ ಸಂಜೆ ಫೋನ್ ಕರೆ ಬಂದಾಗಲೂ ಹೆಸರು ಖಚಿತಪಡಿಸಿಕೊಳ್ಳಿ ಎಂದು ಹೇಳಿಕೊಂಡಿದ್ದರು. ಕರೆ ಮಾಡಿದ ಅಧಿಕಾರಿ ಖಚಿತಪಡಿಸಿದ ಬಳಿಕವೇ ನಿಮಗೆ ಕರೆ ಮಾಡುತ್ತಿರುವುದು ಎಂದ ಕಾರಣ ಬಾಬು ಪಿಲಾರ್ ಬೆಂಗಳೂರಿಗೆ ತೆರಳಿದರೂ ಇದೀಗ ಆಯ್ಕೆ ಸಮಿತಿಯ ಎಡವಟ್ಟಿನಿಂದ ವಾಪಸ್ ಬರುವಂತಾಗಿದೆ.
ನಿನ್ನೆ ದ.ಕ.ಜಿಲ್ಲಾಡಳಿತ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಬಾಬು ಪಿಲಾರ್ ಅವರ ಹೆಸರಿತ್ತು. ಆದರೆ ರಾಜ್ಯ ಮಟ್ಟದ ಸುವರ್ಣ ಮಹೋತ್ಸವ ಪ್ರಶಸ್ತಿ ಸ್ವೀಕರಿಸಲು ಕರೆ ಬಂದ ಮೇರೆಗೆ ಬೆಂಗಳೂರಿಗೆ ತೆರಳಿದ್ದರು. ಇದೀಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗಿದೆ. ಆಯ್ಕೆ ಸಮಿತಿಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಸಾಧಕರೊಬ್ಬರನ್ನು ಬೆಂಗಳೂರಿಗೆ ಕರೆಯಿಸಿ ಪ್ರಶಸ್ತಿ ನೀಡದೆ ಇರುವುದು ಸಮಾಜ ಸೇವಕರಿಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.