ವಾಟ್ಸಾಪ್‌ನಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಕರೆ; ಸುಲಿಗೆಗಾಗಿ ಸೈಬರ್ ಖದೀಮರಿಂದ ಹೊಸ ತಂತ್ರ

Update: 2024-06-12 09:46 GMT

PC: shutterstock

ಮಂಗಳೂರು, ಜೂ. 12: ನಗರ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಕೆಲ ವಿದ್ಯಾರ್ಥಿಗಳ ಪೋಷಕರಿಗೆ ಕಳೆದೆರಡು ದಿನಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಲಾ ಅವಧಿಯಲ್ಲಿ ಪೋಷಕರನ್ನು ಬೆದರಿಸಿ ಹಣ ದೋಚುವ ಖದೀಮರ ಕುತಂತ್ರ ಇದಾಗಿದ್ದು, ಇಂತಹ ಕರೆಗಳ ಬಗ್ಗೆ ಪೋಷಕರು ಅಥವಾ ಶಿಕ್ಷಣ ಸಂಸ್ಥೆಗಳು ಭಯ ಪಡಬೇಕಾಗಿಲ್ಲ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. 

ವಾಟ್ಸಾಪ್ ಮೂಲಕ ಸ್ವೀಕರಿಸಲಾದ ಈ ಕರೆಗಳು ಪೋಲೆಂಡ್ ಮತ್ತು ಪಾಕಿಸ್ತಾನದ ವಿದೇಶಿ ಸಂಖ್ಯೆಗಳನ್ನು ಹೊಂದಿದ್ದು, ಕರೆ ಮಾಡಿದಾತ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಹಿಂದಿಯಲ್ಲಿ ಮಾತನಾಡುವ ವ್ಯಕ್ತಿ, ಕರೆ ಸ್ವೀಕರಿಸಿದ ಪೋಷಕರಿಗೆ, ತಮ್ಮ ಮಗ/ಮಗಳನ್ನು ಬಂಧಿಸಿದ್ದು, ಬಿಡುಗಡೆ ಮಾಡಲು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಕರೆಗಳನ್ನು ಪರಿಶೀಲಿಸಿದಾಗ ಇವುಗಳು ನಕಲಿಯಾಗಿದ್ದು, ವಿದ್ಯಾರ್ಥಿಗಳು ಸುರಕ್ಷಿತವಾಗಿರುವುದು ಕಂಡು ಬಂದಿದೆ. ಅಪರಿಚಿತ ವಿದೇಶಿ ಸಂಖ್ಯೆಗಳಿಂದ ವಾಟ್ಸಾಪ್‌ನಲ್ಲಿ ಬರುವ ಯಾವುದೇ ಕರೆಗಳನ್ನು ಸ್ವೀಕರಿಸುವುದನ್ನು ತಪ್ಪಿಸಬೇಕು. ಅಂತಹ ಯಾವುದೇ ಕರೆ ಬಂದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News