ಹರೇಕಳ ಆಡಳಿತ ಸೌಧಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ
ಕೊಣಾಜೆ; ಮೂಲತಃ ಪಾವೂರು ಗ್ರಾಮದ ಕಿಲ್ಲೂರಿನವರಾದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ, ಪ್ರಸ್ತುತ ಉಡುಪಿ ಜಿಲ್ಲಾಧಿಕಾರಿಯಾಗಿರುವ ಡಾ. ವಿದ್ಯಾ ಕುಮಾರಿ ಅವರು ಹರೇಕಳ ಗ್ರಾಮದ ಆಡಳಿತ ಸೌಧಕ್ಕೆ ರವಿವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹರೇಕಳ, ಪಾವೂರು ಗ್ರಾಮಕ್ಕೂ ನನಗೂ ಅವಿನಭಾವ ಸಂಬಂಧ ಇದೆ. ಈ ಗ್ರಾಮದಲ್ಲಿ ಕಳೆದ ಬಾಲ್ಯದ ನೆನಪನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹರೇಕಳ ಗ್ರಾಮ ಇಂದು ಬಹಳಷ್ಟು ಬದಲಾಗಿದ್ದು, ಮಾದರಿ ಗ್ರಾಮ ಪಂಚಾಯತಿ ಕಟ್ಟಡ ಕೂಡಾ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹರೇಕಳ ಗ್ರಾಮವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದರು.
ಇದೇ ಸಂದರ್ಭ ಪರ್ತಕರ್ತ ಹಂಝ ಮಲಾರ್ ಹಾಗೂ ಅನ್ಸಾರ್ ಇನೋಳಿ ಅವರ ಸಂಪಾದಕತ್ವದ 'ನಲ್ಮೆಯ ಹರೇಕಳ ಗ್ರಾಮ' ಕೃತಿಯನ್ನು ಡಾ. ವಿದ್ಯಾ ಕುಮಾರಿ ಅವರಿಗೆ ಗೌರವಪೂರ್ವಕವಾಗಿ ಅಧ್ಯಕ್ಷ ಬದ್ರುದ್ದೀನ್ ಹಸ್ತಾಂತರಿಸಿದರು. ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಮಲಾರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಅಬ್ದುಲ್ ಸತ್ತಾರ್, ಅಬೂಬಕ್ಕರ್ ಸಿದ್ದೀಕ್ ಮತ್ತಿತರರು ಉಪಸ್ಥಿತರಿದ್ದರು.