ಉಳ್ಳಾಲ: ಗ್ರಾಮ ಸಭೆಯಲ್ಲಿ ಮೂಲಭೂತ ಸೌಕರ್ಯಗಳದ್ದೇ ಚರ್ಚೆ
ಉಳ್ಳಾಲ : ಬಸ್ ತಂಗುದಾಣ, ಕುಡಿಯುವ ನೀರು,ನಾದುರಸ್ತಿಯಲ್ಲಿರುವ ರಸ್ತೆ, ಕಳಪೆ ಕಾಮಗಾರಿ, ರಸ್ತೆ ಬದಿ ಲಾರಿ ನಿಲುಗಡೆ , ಮುಂತಾದ ಮೂಲಭೂತ ಸೌಕರ್ಯಗಳ ಬಗ್ಗೆ ಪರ ವಿರೋಧ ಚರ್ಚೆಗಳು ತಲಪಾಡಿ ಗ್ರಾಮ ಸಭೆಯಲ್ಲಿ ನಡೆಯಿತು
ತಲಪಾಡಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಕೆಸಿರೋಡ್ ರವರ ಅಧ್ಯಕ್ಷತೆಯಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಭವನದಲ್ಲಿ ಸೋಮವಾರ ನಡೆದ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು,ಈಗಿರುವ ಅಬಕಾರಿ ಇಲಾಖೆ ಕಚೇರಿ ಬಳಿ ನೀರಿನ ಮೂಲ ಇವೆ. ನಮಗೆ ಕುಡಿಯುವ ನೀರು ಬೇಕು.ಅಬಕಾರಿ ಇಲಾಖೆ ಗೆ ಬೇರೆ ಜಾಗ ಕೊಡಿ, ನಮಗೆ ಕುಡಿಯುವ ನೀರು ಒದಗಿಸಿ ಕೊಡಿ ಎಂದು ಒತ್ತಾಯಿಸಿದರು.
ತಲಪಾಡಿ ಬಳಿ ವಾಹನಗಳ ಪಾರ್ಕಿಂಗ್ ಆಗುತ್ತಿರುವ ಬಗೆ ಗ್ರಾಮಸ್ಥರೊಬ್ಬರು ಪ್ರಸ್ತಾಪಿಸಿ,ಘನ ವಾಹನಗಳು ತಲಪಾಡಿ,ಕೆಸಿರೋಡ್ ಪರಿಸರದ ರಸ್ತೆ ಬದಿ ಪಾರ್ಕಿಂಗ್ ಮಾಡುತ್ತಿದ್ದು, ಇದರಿಂದ ಅಪಘಾತ ಗಳು ಸಂಭವಿಸುತ್ತದೆ. ಸಂಚಾರಕ್ಕೂ ತೊಂದರೆ ಆಗುತ್ತದೆ . ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನಹರಿಸುವಂತೆ ಒತ್ತಾಯಿಸಿದರು.
ಅಲ್ಲದೇ ತಲಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಮಗಾರಿ ಆಗಿಲ್ಲ.ಆಗಿರುವ ಕಾಮಗಾರಿ ಕಳಪೆ ಆಗಿವೆ.ಎಂಜಿನಿಯರ್ ಇಲ್ಲದೇ ಕಾಮಗಾರಿ ಮಾಡಲಾಗಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು.
ಕೆಲವು ಕಡೆ ಕಾಂಪೌಂಡ್ ಚರಂಡಿ ಗೆ ಸಮಾನ ಆಗಿ ನಿರ್ಮಿಸುತ್ತಿದ್ದಾರೆ.ಇದರಿಂದ ಮಳೆ ನೀರು ಹರಿದು ಹೋಗಲು ಜಾಗ ಇರುವುದಿಲ್ಲ .ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಕೇಶವ ಅವರು ಕಾಂಪೌಂಡ್ ಚರಂಡಿ ಗೆ ಸಮಾನ ಆಗಿ ನಿರ್ಮಾಣ ಆಗುವ ಸಂದರ್ಭ ನಮ್ಮ ಗಮನ ಹರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು
ತಲಪಾಡಿ ಗ್ರಾಮ ವ್ಯಾಪ್ತಿಯಲ್ಲಿ ತಂಗುದಾಣ ಇಲ್ಲ.ಮಳೆಗೆ , ಬಿಸಿಲಿಗೆ ಪ್ರಯಾಣಿಕರು ಸಂಕಷ್ಟ ದಿಂದ ಬಸ್ ಕಾಯಬೇಕಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು.ನಿಮ್ಮಿಂದ ಆಗದಿದ್ದರೆ ಮಹಿಳೆಯರಾದ ನಾವು ಹಣಸಂಗ್ರಹ ಮಾಡಿ ಬಸ್ ತಂಗುದಾಣ ನಿರ್ಮಿಸುತ್ತೇವೆ ಎಂದು ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಿಡಿಒ ಅವರು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನಹರಿಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ನೋಡೆಲ್ ಅಧಿಕಾರಿಯಾಗಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿ ಜೇಮ್ಸ್ ಕುಟ್ಟಿನ್ನ ಕಾರ್ಯ ನಿರ್ವಹಿಸಿದರು.
ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ನಡೆಸಿದರು. ಪಿಡಿಒ ಕೇಶವ ಗ್ರಾಮ ಪಂಚಾಯತ್ ನಿಂದ ಸಿಗುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಕಾರ್ಯದರ್ಶಿ ನಿರ್ಣಯ ಮಂಡನೆ ಮಾಡಿದರು.
,ಉಪಾಧ್ಯಕ್ಷ ಪುಷ್ಪಾವತಿ ಶೆಟ್ಟಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.