ಉಳ್ಳಾಲ‌: ನಗರಸಭೆಯಲ್ಲಿ ಸಚಿವ ರಹೀಂ ಖಾನ್ ಪ್ರಗತಿ ಪರಿಶೀಲನೆ

Update: 2023-09-26 17:20 GMT

ಉಳ್ಳಾಲ: ಉಳ್ಳಾಲ‌ ನಗರಸಭೆಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್ ಮಂಗಳವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಸಿಬ್ಬಂದಿ ಕೊರತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹಾರ ಮಾಡುವಂತೆ ಮನವಿ ಮಾಡಿದರು.

ಕಳೆದ ನಾಲ್ಕು ತಿಂಗಳುಗಳಿಂದ ನಗರಸಭೆಯಿಂದ ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲ. ಇದರಿಂದಾಗಿ ತುಂಬಾ ಸಮಸ್ಯೆ ಆಗಿದೆ. ‌ಹಿಂದಿನ ಅಧಿಕಾರಿ ರಾಜೇಶ್ ಎಂಬವರ ಎಡವಟ್ಟಿನಿಂದಾಗಿ ನೀರು ಕುಡಿಯಲಾಗದ ಪರಿಸ್ಥಿತಿ ಇದೆ. ಮೂರು ಇಂಜಿನಿಯರ್ ಮತ್ತು ಆರೋಗ್ಯ ಅಧಿಕಾರಿಗಳ ವ್ಯವಸ್ಥೆ ತಕ್ಷಣ ಮಾಡಿ. ಪಡಿತರ ಚೀಟಿ ಮತ್ತು ಕಡಲ್ಕೊರೆತ ಸಮಸ್ಯೆ ಅರಿಯಲು ಜಿಲ್ಲಾಧಿಕಾರಿ ಕೌನ್ಸಿಲರ್ ಗಳ ಸಭೆ ನಡೆಸಲಿ ಎಂದು ಹಿರಿಯ ಕೌನ್ಸಿಲರ್ ಮಹಮ್ಮದ್ ಮುಕಚ್ಚೇರಿ ಮನವಿ ಮಾಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ನೀರಿನ ಸಮಸ್ಯೆ ಬಗೆಹರಿಯಲಿದೆ. ಕಡಲ್ಕೊರೆತ ಸಮಸ್ಯೆಗೆ ಶೇ.90 ರಷ್ಟು ಪರಿಹಾರ ಆಗಿದೆ, ಅಧಿಕಾರಿಗಳ ಸಮಸ್ಯೆಗೆ ಸ್ಪೀಕರ್ ಬಳಿ ತಿಳಿಸಲಾಗಿದೆ. ಘನತ್ಯಾಜ್ಯ ಘಟಕಕ್ಕೆ ನರಿಂಗಾನದಲ್ಲಿ ಜಮೀನು ಗುರುತಿಸಲಾಗಿದ್ದು, ಆದಷ್ಟು ಬೇಗ ಮಾಡಿಕೊಡಬೇಕು ಎಂದು ನಿಕಟಪೂರ್ವ ಉಪಾಧ್ಯಕ್ಷ ಅಯೂಬ್ ಮಂಚಿಲ ಮನವಿ ಮಾಡಿದರು.

13ನೇ ವಾರ್ಡಿನಲ್ಲಿ ಒಂದೇ ಒಂದು ಕೆಲಸವೂ ಆಗಿಲ್ಲ, ನಗರಸಭೆ ಅನುದಾನದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಸದಸ್ಯ ‌ ಅಸ್ಗರ್ ಅಲಿ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು, ಸಿಬ್ಬಂದಿ ಸೇರಿ 136 ಹುದ್ದೆಗಳಿದ್ದರೂ ಕೇವಲ 15 ಮಂದಿ ಮಾತ್ರ ಇದ್ದೇವೆ. ನಗರಸಭೆಯಲ್ಲಿ ಹಲವು ಹುದ್ದೆಗಳು ಖಾಲಿಯಿದೆ, ಇಂದಿರಾ ಕ್ಯಾಂಟೀನ್ ನಲ್ಲಿ ಪ್ರತಿದಿನ 750 ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ, ನಿಮ್ಮ ಸೂಚನೆಯಂತೆ ಸಿಸಿ ಕೆಮರಾ ಅಳವಡಿಸಲಾಗಿದೆ. ನಗರಸಭೆಯ ಸನಿಹದಲ್ಲಿ ಬಸ್ ತಂಗುದಾಣ ಮತ್ತು ಆಸ್ಪತ್ರೆ ಇರುವುದರಿಂದ ಇನ್ನೊಂದು ಇಂದಿರಾ ಕ್ಯಾಂಟೀನ್ ಗೆ ಬೇಡಿಕೆ ಸಲ್ಲಿಸಲಾಗಿದೆ. ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಐದು ತಾರೀಕಿನ ಮೊದಲು ಖಾತೆಗೆ ವೇತನ ಜಮಾಯಿಸಲಾಗುತ್ತಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ತಿಳಿಸಿದರು.

ಸೋಮೇಶ್ವರದಲ್ಲಿ ಉಪ್ಪು ನೀರಿನಿಂದ ಸಮಸ್ಯೆ ಎದುರಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದರು.

ತಾರತಮ್ಯ ಧೋರಣೆ ಬೇಡ: ಖಾನ್

ನಗರಸಭೆಯಿಂದ ವಾಣಿ ಆಳ್ವ ಅವರು ವರ್ಗಾವಣೆ ಆಗಿದ್ದರೂ ಖಾದರ್ ಅವರು ಮುಖ್ಯಮಂತ್ರಿ ಜೊತೆ ಮಾತನಾಡಿ ಮತ್ತೆ ಹಾಕಿದ್ದು ಅವರ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ನಗರಸಭೆಯಲ್ಲೇ ಸಭೆ ನಡೆಸಿ ಸಮಸ್ಯೆ ಆಲಿಸುವಂತೆ ಜಿಲ್ಲಾಧಿ ಕಾರಿಗೆ ಸೂಚನೆ ನೀಡುತ್ತೇನೆ. ನೀರಿನ ಕಾಮಗಾರಿಗೆ ಅನುದಾನದ ಸಮಸ್ಯೆ ಇಲ್ಲ. ಗೌರವ ಧನ ಹೆಚ್ಚಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ತಾರತಮ್ಯ ಧೋರಣೆ ಸರಿಯಲ್ಲ. ಚುನಾವಣೆ ಸಂದರ್ಭ ಮಾತ್ರ ಪಕ್ಷ, ನಂತರ ಎಲ್ಲರೂ ಒಂದೇ.‌ ಮುಂದಕ್ಕೆ ಅನುದಾನ ಬಿಡುಗಡೆಯಲ್ಲಿ ಧೋರಣೆ ಬೇಡ ಎಂದು ಸಚಿವ ರಹೀಂ ಖಾನ್ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಶಾಂತಿ ಡಿಸೋಜ, ಯೋಜನಾ ನಿರ್ದೇಶಕ ಅಭಿಷೇಕ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News