ಮೀಫ್‌ನಲ್ಲಿ ಮುಮ್ತಾಝ್ ಅಲಿಯ ಸೇವೆ ಅವಿಸ್ಮರಣೀಯ : ಉಮರ್ ಟಿ.ಕೆ

Update: 2024-10-13 08:14 GMT

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ )ದ ವತಿಯಿಂದ ಇತ್ತೀಚೆಗೆ ಅಕಾಲಿಕವಾಗಿ ನಿಧನ ಹೊಂದಿದ ಬಿ.ಎಂ. ಮುಮ್ತಾಝ್ ಅಲಿ ಅವರಿಗೆ ಶನಿವಾರ ನಗರದಲ್ಲಿ ನುಡಿನಮನ ಸಲ್ಲಿಸಲಾಯಿತು.

ಆನ್‌ಲೈನ್ ಮೂಲಕ ಸಭೆಯಲ್ಲಿ ಜೊತೆಯಾದ ಮೀಫ್ ಗೌರವಾಧ್ಯಕ್ಷ ಉಮರ್ ಟಿ.ಕೆ, ಗೌರವ ಸಲಹೆಗಾರ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಉಮರ್ ಟೀಕೆ ಮರ್ಹೂಂ ಮುಮ್ತಾಝ್ ಅಲಿ ಅವರು ಸಂಘಟನಾ ಚತುರರಾಗಿದ್ದರು. ಅನುಭವಿಯಾಗಿದ್ದ ಅವರು ತ್ಯಾಗ ಮನೋಭಾವ ಹೊಂದಿದ್ದರು. ಸಾರ್ವಜನಿಕರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅವರ ಅಗಲಿಕೆಯು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಮೀಫ್‌ನಲ್ಲಿ ಅವರ 16 ವರ್ಷಗಳ ಸೇವೆಯು ಅನುಸ್ಮರಣೀಯ ಎಂದರು.

ಅಧ್ಯಕ್ಷತೆ ವಹಿಸಿದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಮುಮ್ತಾಝ್ ಅಲಿ ಹೆಚ್ಚಿನ ಆದ್ಯತೆ ನೀಡಿದ್ದರು. ಮೀಫ್ ಸಹಿತ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಪಣತೊಟ್ಟಿದ್ದರು. ಸಮಯ ಬದ್ಧತೆ, ಕಾರ್ಯಕ್ಷಮತೆ ಮತ್ತು ಬಡವರಿಗೆ, ಸಮಾಜಕ್ಕೆ ತಮ್ಮ ಜೀವನದ ಬಹು ಬಾಗವನ್ನು ವ್ಯಯಿಸಿದ ಮುಮ್ತಾಝ ಅಲಿ ಅವರ ಆದರ್ಶಗಳು ನಮಗೆ ಮಾದರಿಯಾಗಿದೆ ಎಂದರು.

ಮುಮ್ತಾಝ್ ಅಲಿ ಅವರ ಸಹೋದರರಾದ ಮೊಯಿದಿನ್ ಬಾವ, ಹನೀಫ್ ಬಾವ ಮಾತನಾಡಿದರು. ಮೀಫ್ ಉಪಾಧ್ಯಕ್ಷರಾದ ಮುಸ್ತಫಾ ಸುಳ್ಯ, ಶಬೀಖಾಝಿ ಉಡುಪಿ, ಕೋಶಾಧಿಕಾರಿ ನಿಸಾರ್ ಕೋಸ್ಟಲ್ ಸಂತಾಪ ಸೂಚಿಸಿದರು.

ಈದ್ಗಾ ಮಸೀದಿಯ ಧರ್ಮಗುರು ಬಶೀರ್ ಸಖಾಫಿ ದುಆಗೈದರು. ಮುಮ್ತಾಝ್ ಅಲಿ ಅವರ ಪುತ್ರ ಮಾಕಿಲ್ ಮತ್ತು ಕುಟುಂಬಸ್ಥರಾದ ಹಾಜಿ ಉಮರಬ್ಬ ಏರ್‌ಲೈನ್ಸ್, ಹಾಜಿ ಫಾರೂಕ್ ಏರ್‌ಲೈನ್ಸ್, ಮೀಫ್ ಪದಾಧಿಕಾರಿಗಳಾದ ಮಯ್ಯದ್ದಿ ಎನ್‌ಎಂಪಿಟಿ, ಸಿರಾಜ್ ಮಣೆಗಾರ ಜೋಕಟ್ಟೆ, ಹೈದರ್ ಮನ್ಷರ್ ಬೆಳ್ತಂಗಡಿ, ಅಡ್ವೋಕೇಟ್ ಫಾರೂಕ್, ಇಕ್ಬಾಲ್ ಕಾಟಿಪಳ್ಳ, ಬಿ.ಎ. ನಝೀರ್ ಕೃಷ್ಣಾಪುರ, ಸಂಶುದ್ದೀನ್ ಕಾಪು, ಪರ್ವೀಝ್ ಅಲಿ, ಅನ್ವರ್ ಹುಸೈನ್ ಗೂಡಿನಬಳಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ಶಾರಿಕ್ ಕುಂಜತ್ತಬೈಲ್ ವಂದಿಸಿದರು. ವಿದ್ಯಾರ್ಥಿ ಹಿಲನ್ ಅಹ್ಮದ್ ಕಿರಾಅತ್ ಪಠಿಸಿದರು. ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News