ಬ್ಯಾಂಕ್‌ಗಳ ಖಾಲಿ ಹುದ್ದೆಗಳಿಗೆ ನೇಮಕ ಆಗ್ರಹಿಸಿ ಎಐಬಿಇಎ ದೇಶವ್ಯಾಪಿ ಆಂದೋಲನ: ವೆಂಕಟಾಚಲಂ

Update: 2024-10-13 11:52 GMT

ಮಂಗಳೂರು: ದೇಶಾದ್ಯಂತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಗೊಳಿಸುವಂತೆ ಆಗ್ರಹಿಸಿ ಮುಷ್ಕರ ಸೇರಿದಂತೆ ದೇಶಾದ್ಯಂತ ಆಂದೋಲನ ನಡೆಸಲು ಎಐಬಿಇಎ ನಿರ್ಧರಿಸಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ)ದ ಅಧ್ಯಕ್ಷ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.

ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಕೆಬಿಇಎ) ವಜ್ರ ಮಹೋತ್ಸವ ಸಮಾರಂಭಕ್ಕೆ ರವಿವಾರ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬ್ಯಾಂಕ್‌ಗಳು ಜನರ ಸೇವೆಗಾಗಿಯೇ ಇವೆ. ಈ ಉದ್ದೇಶಕ್ಕಾಗಿ ಬ್ಯಾಂಕ್‌ಗಳಲ್ಲಿ ಸಾಕಷ್ಟು ಸಿಬ್ಬಂದಿ ಇರಬೇಕು. ಆದರೆ ಕೆಲವು ವರ್ಷಗಳಿಂದ ಬ್ಯಾಂಕ್‌ಗಳು ಅಗತ್ಯದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ನೇಮಕಾತಿ ನಿಧಾನಗತಿಯಲ್ಲಿ ಸಾಗಿದೆ. ಅಧೀನ ನೌಕರರ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಲಕ್ಷಾಂತರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಇದು ಬ್ಯಾಂಕ್‌ಗಳಲ್ಲಿನ ಪರಿಣಾಮಕಾರಿ ಮತ್ತು ತೃಪ್ತಿದಾಯಕ ಗ್ರಾಹಕ ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬದಲು, ಬ್ಯಾಂಕ್‌ಗಳು ಈ ಖಾಯಂ ಉದ್ಯೋಗಗಳನ್ನು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಹೊರಗುತ್ತಿಗೆ ಮಾಡಲು ಪ್ರಯತ್ನಿಸುತ್ತಿವೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ನುಡಿದರು.

ಆಧುನಿಕ ತಂತ್ರಜ್ಞಾನ ಬಳಕೆ ಸ್ವಾಗತಾರ್ಹ: ಬ್ಯಾಂಕ್‌ಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದೇ ವೇಳೆ ಸಾಕಷ್ಟು ಸಿಬ್ಬಂದಿಯನ್ನು ನೇಮಕ ಮಾಡಲಿ. ಕೇವಲ ಯಂತ್ರಗಳ ಬಳಕೆಯನ್ನೇ ಹೆಚ್ಚು ಅವಲಂಭಿಸಿದರೆ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ದೊರೆಯದು. ಸಿಬ್ಬಂದಿ ಸಾಕಷ್ಟು ಇದ್ದರೆ ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್‌ಗಳಲ್ಲಿ ಖಾಲಿ ಹುದ್ದೆಗಳಿಗೆ ನೇಮಕಗೊಳಿಸುವಂತೆ ಒತ್ತಾಯಿಸಿ ದೇಶಾವ್ಯಾಪಿ ಆಂದೋಲನ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಿನ ತಿಂಗಳು ಬ್ಯಾಂಕ್ ನೌಕರರ ಸಮಾವೇಶ ನಡೆಯಲಿದ್ದು, ಅಲ್ಲಿ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಾ ಗುವುದು ಎಂದು ಅವರು ಹೇಳಿದರು.

ಕಾರ್ಪೋರೇಟ್ ಕಂಪೆನಿಗಳಿಗೆ ರಿಯಾಯಿತಿಗಳನ್ನು ನಿಲ್ಲಿಸಿ: ಬ್ಯಾಂಕ್‌ಗಳಲ್ಲಿ ಕೆಟ್ಟ ಸಾಲಗಳು, ಕಾರ್ಯನಿರ್ವಹಿಸದ ಆಸ್ತಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿವೆ. ಡೀಫಾಲ್ಟ್ ಆಗಿರುವ ಸಾಲಗಳಲ್ಲಿ ಹೆಚ್ಚಿನವು ದೊಡ್ಡ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಂದ ಬರ ಬೇಕಾಗಿರುವ ಸಾಲಗಳಾಗಿವೆ. ಆದರೆ ಸಾಲ ವಸೂಲಿ ಮಾಡಲು ಇಂತಹ ಸುಸ್ತಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು ಅವರಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿದ್ದ ಅಪಾರ ಪ್ರಮಾಣದ ಸಾಲ ಮನ್ನಾ ಮಾಡಲಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಮನೆ ಕಟ್ಟಲು, ವಾಹನ, ಕೃಷಿ, ವ್ಯಾಪಾರ ಮತ್ತಿತರ ಉದ್ದೇಶಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಜನಸಾಮಾನ್ಯರ ಸಾಲ ವಸೂಲಾತಿಗೆ ದಬ್ಬಾಳಿಕೆಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ದೊಡ್ಡ ಸಾಲ ಸುಸ್ತಿದಾರರಿಗೆ ಈ ರಿಯಾಯಿತಿಗಳನ್ನು ನೀಡುವುದು ಸರಿಯಲ್ಲ. ಅಂಥವರ ಸಾಲವನ್ನು ಮನ್ನಾ ಮಾಡುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದರು.

ಸಾಲ ಸುಸ್ತಿದಾರರ ಪಟ್ಟಿಯನ್ನು ಸರಕಾರ ಪ್ರಕಟಿಸಲಿ: ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದಿರುವ ಸಾಲ ಸುಸ್ತಿದಾರರ ಪಟ್ಟಿಯನ್ನು ಸರಕಾರ ಪ್ರಕಟಿಸಬೇಕು. ಸಾಲ ಸುಸ್ತಿದಾರರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವೆಂಕಟಾಚಲಂ ಆಗ್ರಹಿಸಿದರು.

ವಜ್ರಮಹೋತ್ಸವ: ಎಐಕೆಬಿಇಎ ಇಂದು ತನ್ನ ೬೦ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 1964ರಲ್ಲಿ ರಚನೆಯಾದ ಒಕ್ಕೂಟವು ಯಶಸ್ವಿಯಾಗಿ ೬೦ ವರ್ಷಗಳನ್ನು ಪೂರೈಸಿದೆ. ಒಕ್ಕೂಟವು ಬ್ಯಾಂಕಿನ ಉದ್ಯೋಗಿಗಳಿಗೆ ಹಲವು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಮತ್ತು ಬ್ಯಾಂಕಿನ ವ್ಯವಹಾರ ಮತ್ತು ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ನಮ್ಮ ಒಕ್ಕೂಟವು ಬ್ಯಾಂಕ್‌ನ ಶೇ 100ರಷ್ಟು ಉದ್ಯೋಗಿಗಳನ್ನು ಪ್ರತಿನಿಧಿಸುತ್ತದೆ ಎಂಬುದು ಗಮನಾರ್ಹ ಮತ್ತು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಸುಮಾರು 50 ವರ್ಷಗಳ ಕಾಲ ನಿರಂತರವಾಗಿ ಎಐಕೆಬಿಇಎ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ಕಾರಂತರನ್ನು ಅವರ ಮನೆಯಲ್ಲಿ ಸಮ್ಮಾನಿಸಲಾಗಿದೆ. ಒಕ್ಕೂಟವನ್ನು ಕಟ್ಟಿ ಬೆಳೆಸುವಲ್ಲಿ ಅವರ ಸೇವೆ ಅನನ್ಯ ಎಂದು ಮಾಹಿತಿ ನೀಡಿದರು.

ಕೆಪಿಬಿಇಎಫ್ ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಅಧ್ಯಕ್ಷೆ ಪೂರ್ಣಿಮಾ.ಪಿ.ರಾವ್,ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪನೀಂದ್ರ, ಬ್ಯಾಂಕ್ ಉದ್ಯೋಗಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಿನ್ಸೆಂಟ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News