ಪೊಳಲಿ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿಯ ನೆಪದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ: ಆರೋಪ

Update: 2024-10-13 14:06 GMT

ಗುರುಪುರ: ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಪೊಳಲಿ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿಯ ನೆಪದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿಸುವ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಪಲ್ಗುಣಿ ಸೇತುವೆಯ ಹೋರಾಟ ಸಮಿತಿ ಪೊಳಲಿ ಅಡ್ಡೂರು ಇದರ ತುರ್ತು ಸಭೆ ರವಿವಾರ ಪೊಳಲಿಯಲ್ಲಿ ನಡೆಯಿತು.

ಈ ಸೇತುವೆ ದುರಸ್ತಿ ಕಾರ್ಯದಿಂದ ಮಂಗಳೂರು ಪೊಳಲಿಯ ಸಂಪರ್ಕ ಕಡಿತಗೊಳ್ಳಲಿದ್ದು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ಹಾಗೂ ಪೊಳಲಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಸೇರಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಸೇತುವೆ ದುರಸ್ತಿ ಕಾಮಗಾರಿ ನಡೆಸುವ ಕುರಿತು ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಈ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸಮಂಜಸವಲ್ಲ. ಹಾಗಾಗಿ ಸಾರ್ವಜನಿಕರಿಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಒಕ್ಕೊರಳಿನಿಂದ ಸಭೆಯಲ್ಲಿ ಆಗ್ರಹಿಸಿದರು.

ಹಲವು ತಿಂಗಳುಗಳಿಂದ ಈ ಸೇತುವೆಯಲ್ಲಿ ಘನ ವಾಹನ ನಿರ್ಬಂಧಿಸಲಾಗಿದೆ. ಇದರಿಂದ ತೊಂದರೆಗಳಾಗುತ್ತಿದ್ದು, ಲೋಕೋಪಯೋಗಿ ಇಲಾಖೆಗೆ ದೂರು ನೀಡಲಾಗಿತ್ತು. ಸೇತುವೆ ಪರಿಶೀಲಿಸುವ ಯಂತ್ರ ಬಂದು ಪರಿಶೀಲನೆ ನಡೆದ ಬಳಿಕ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದರು. ಅದರಂತೆ ಸೆ.9ರಂದು ಯಂತ್ರ ಬಂದು ಪರಿಶೀಲನೆ ನಡೆಸಿದ್ದು, ಈ ವರೆಗೂ ಅದರ ವರದಿಯ ಮಾಹಿತಿಯನ್ನಾಗಲೀ, ಪರ್ಯಾಯ ಮಾರ್ಗದ ಬಗೆಯಾಗಲೀ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆಯಲ್ಲಿ ಘನ ವಾಹನ ಸಂಚಾರ ನಿರ್ಭಂಧಿಸಿ ತಿಂಗಳುಗಳೇ ಕಳೆದಿವೆ. ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸಿ 20ದಿನಗಳು ಕಳೆದಿವೆ. ಈ ವರೆಗೂ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಟ್ಟಿಲ್ಲ. ಹೀಗಾಗಿ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು, ಸಂದರದರು, ಜಿಲ್ಲಾಧಿಕಾರಿಗೆ ಹಲವು ಬಾರಿ ಲಿಖಿತ ದೂರುಗಳನ್ನೂ ನೀಡಿದರೂ ಅವರೂ ನಮ್ಮ ದೂರುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದರು.

ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಬೇಡಿಕೆಯನ್ನು ಈಡೇರಿಸುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಅ.15ರಂದು ಬೆಳಗ್ಗೆ 10ಗಂಟೆಗೆ ಸರಿಯಾಗಿ ಸೇತುವೆ ಮೇಲೆ ಹೆದ್ದಾರಿ ಬಂದ್‌ ಮಾಡಿ ತೀವ್ರ ತರಹದ ಪ್ರತಿಭಟನೆ ನಡೆಸುವುದಾಗಿ ತುರ್ತು ಸಭೆಯಲ್ಲಿ ಸಾರ್ವಜನಿಕರು ಘೋಷಿಸಿದರು.

‌ಈ ಸೇತುವೆಯನ್ನು ಮುಚ್ಚಿ ದುರಸ್ತಿ ಕಾಮಗಾರಿ ನಡೆಸುವ ಕುರಿತು ನಮಗೆ ಯಾವುದೇ ಆಕ್ಷೇಪ ಇಲ್ಲ. ಆದರೆ, ನಮಗೆ ಪರ್ಯಾಯ ರಸ್ತೆ ಮಾರ್ಗ ಕಲ್ಪಿಸಬೇಕೆಂಬುದಷ್ಟೇ ನಮ್ಮ ಆಗ್ರಹ. ಈ ಸಂಬಂಧ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗೆ ಮೂರು-ಮೂರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಅವರಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಅ.14ರಂದು ಒಂದು ದಿನಗಳ ಕಾಲಾವಕಾಶವನ್ನು ಎಲ್ಲರಿಗೂ ನೀಡಲಾಗಿದೆ. ನಾಳೆಯ ಒಳಗಾಗಿ ನಮಗೆ ಪರ್ಯಾಯ ರಸ್ತೆ ವ್ಯವಸ್ಥೆಯ ಬಗ್ಗೆ ತೀರ್ಮಾನ ಕೈಗೊಳ್ಳದಿದ್ದಪಕ್ಷದಲ್ಲಿ ಅಡ್ಡೂರು, ಪೊಳಲಿಯ ಸರ್ವ ನಾಗರೀಕರು ಸೇರಿಕೊಂಡು ಸೇತುವೆಯ ಮೇಲೆ ತೀವ್ರ ತರಹದ ಪ್ರತಿಭಟನೆ ನಡೆಸಲಿದ್ದೇವೆ.

- ಚಂದ್ರಹಾಸ ಪಳ್ಳಿಪಾಡಿ, ಉಪಾಧ್ಯಕ್ಷರು, ಪಲ್ಗುಣಿ ಸೇತುವೆಯ ಹೋರಾಟ ಸಮಿತಿ ಪೊಳಲಿ ಅಡ್ಡೂರು





 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News