ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ವಜ್ರ ಮಹೋತ್ಸವ

Update: 2024-10-13 14:21 GMT

ಮಂಗಳೂರು: ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಕೆಬಿಇಎ) ವಜ್ರ ಮಹೋತ್ಸವವನ್ನು ರವಿವಾರ ಆಚರಿಸಲಾಯಿತು.

ಎಐಕೆಬಿಇಎ ಆಡಿಟೋರಿಯಮ್‌ನಲ್ಲಿ ನಡೆದ ಸಮಾರಂಭದಲ್ಲಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ)ದ ಅಧ್ಯಕ್ಷ ಸಿ.ಎಚ್. ವೆಂಕಟಾಚಲಂ ಕೇಕ್ ಕತ್ತರಿಸುವ ಮೂಲಕ ವಜ್ರ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶತಮಾನ ಕಂಡಿರುವ ಕರ್ಣಾಟಕ ಬ್ಯಾಂಕ್‌ನ ಉದ್ಯೋಗಿಗಳ ಸಂಘಟನೆಯು 60 ವರ್ಷಗಳನ್ನು ಪೂರ್ಣಗೊಳಿಸಿದೆ. ಕರ್ಣಾಟಕ ಬ್ಯಾಂಕ್ ಏಕೈಕ ನೋಂದಾಯಿತ ನೌಕರರ ಸಂಘಟನೆಯನ್ನು ಹೊಂದಿದ್ದು, ಅದು ಅಖಿಲ ಭಾರತ ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಸಂಘವಾಗಿದೆ ಎಂದರು.

ದೇಶದ ಯಾವುದೇ ರಾಜ್ಯದಲ್ಲಿರುವ ಕರ್ಣಾಟಕ ಬ್ಯಾಂಕ್‌ನ ಯಾವುದೇ ಶಾಖೆಯಲ್ಲಿ ಕೆಲಸ ಮಾಡಿದರೂ ಸಿಬ್ಬಂದಿಗೆ ವೇತನದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಸಿಬ್ಬಂದಿಗೆ ಎಲ್ಲ ಕಡೆ ಏಕರೂಪದ ವೇತನ ವ್ಯವಸ್ಥೆ ಇದೆ. ಇದು ಕರ್ಣಾಟಕ ಬ್ಯಾಂಕ್‌ನ ವಿಶೇಷತೆಯಾಗಿದೆ ಎಂದು ಹೇಳಿದರು.

ದೇಶದ ಕೆಲವು ಬ್ಯಾಂಕ್‌ಗಳಲ್ಲಿ ದೇಶದ ಎಲ್ಲ ಶಾಖೆಗಳಲ್ಲಿ ಸಿಬ್ಬಂದಿಯ ವೇತನ ಒಂದೇ ರೀತಿ ಇರುವುದಿಲ್ಲ. ಆದರೆ ಕರ್ಣಾಟಕ ಬ್ಯಾಂಕ್ ಎಲ್ಲ ವಿಚಾರಗಳಲ್ಲೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಪುರುಷ ಮತ್ತು ಮಹಿಳಾ ಉದ್ಯೋಗಿಗಳಿಗೂ ಸಮಾನ ರೀತಿಯಲ್ಲಿ ವೇತನ ನೀಡುತ್ತಿದೆ. ಮಹಿಳಾ ಉದ್ಯೋಗಿಗಳಿಗೂ ಹೆಚ್ಚು ಸಂಬಳ ನೀಡಿದರೆ ಅವರು ಕೂಡಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎನ್ನುವುದನ್ನು ಕರ್ಣಾಟಕ ಬ್ಯಾಂಕ್ ತೋರಿಸಿ ಕೊಟ್ಟಿದೆ ಎಂದು ಹೇಳಿದರು.

ಹಿಂದೆ ದೇಶದಲ್ಲಿ ಬ್ಯಾಂಕ್‌ಗಳ ಸೇವಾ ಶುಲ್ಕಗಳು ಉಚಿತವಾಗಿತ್ತು. ಈಗ ಭಾರೀ ಏರಿಕೆ ಮಾಡಲಾಗಿದ್ದು, ಬಡವರಿಗೆ ಹೊರೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ಪಡೆದ ಸಾಲ ಹಿಂತಿರುಗಿಸದೆ ಬ್ಯಾಂಕ್‌ಗಳ ಆದಾಯ ಕಡಿಮೆ ಆಗಿದೆ. ಅದಕ್ಕಾಗಿ ಸೇವಾ ಶುಲ್ಕ ಏರಿಕೆಯಾಗಿದೆ ಎಂದು ಹೇಳಿದರು..

ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಅಧ್ಯಕ್ಷೆ ಪೂರ್ಣಿಮಾ.ಪಿ.ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆಪಿಬಿಇಎಫ್ ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್ ಮುಖ್ಯ ಅತಿಥಿಯಾಗಿದ್ದರು.

ಬ್ಯಾಂಕ್ ಉದ್ಯೋಗಿಗಳ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಿನ್ಸೆಂಟ್ ಡಿ ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಬಿಒಒ ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಗ್ಡೆ ಎಸ್ ಶುಭ ಹಾರೈಸಿದರು.

ಅಖಿಲ ಭಾರತ ಕರ್ನಾಟಕ ಬ್ಯಾಂಕ್ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪನೀಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News