ಸೆ.29ರಂದು ಕರ್ನಾಟಕ ಬಂದ್ ಕರೆಗೆ ದ.ಕ.ಜಿಲ್ಲೆಯಲ್ಲಿ ವ್ಯಕ್ತವಾಗದ ಬೆಂಬಲ
ಮಂಗಳೂರು, ಸೆ. 28: ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುವ ಕ್ರಮ ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ಸೆ.29ರಂದು ವಿವಿಧ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಕರೆಗೆ ಯಾವುದೇ ರಾಜಕೀಯ ಅಥವಾ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿಲ್ಲ.
ಜಿಲ್ಲೆಯ ಯಾವುದೇ ರಾಜಕೀಯ ಪಕ್ಷ, ಸಂಘಟನೆಗಳಾಗಲೀ ಬಂದ್‌ಗೆ ಬೆಂಬಲ ಸೂಚಿಸಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಖಾಸಗಿ ಬಸ್, ಆಟೋರಿಕ್ಷಾಗಳು ಎಂದಿನಂತೆ ಸಂಚರಿಸಲಿದೆ. ವ್ಯಾಪಾರಸ್ಥರು ಕೂಡಾ ಬಂದ್ ಮಾಡುವ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ.ಜಿಲ್ಲಾ ಘಟಕ ಸೆ. 30ರಂದು ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರಕಟನೆಯಲ್ಲಿ ತಿಳಿಸಿದೆ.
ವಿವಿಧ ಸಂಘಟನೆಗಳು ರಾಜ್ಯ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್‌ಗಳು ಬಂದ್ ಮಾಡುವ ಯಾವುದೇ ನಿರ್ಧಾರ ಇಲ್ಲ. ಎಂದಿನಂತೆ ಸಂಚಾರ ನಡೆಸಲಿವೆ ಎಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪಾಪರ್ತಿಪಾಡಿ ತಿಳಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಶುಕ್ರವಾರ ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ, ಕೇವಲ ನೈತಿಕ ಬೆಂಬಲ ಮಾತ್ರ ನೀಡಲಾಗುವುದು. ಎತ್ತಿನಹೊಳೆ ವಿಚಾರದಲ್ಲಿ ಕನ್ನಡ ಸಂಘಟನೆಗಳ ಬೆಂಬಲ ಕೇಳಿದ್ದೆವು. ಆಗ ನೀರು ಎಲ್ಲರ ಹಕ್ಕು ಎಂದು ಹೇಳಿ ಬೆಂಬಲ ನೀಡಿಲ್ಲ. ತುಳು ಭಾಷೆ ವಿಚಾರದ ಹೋರಾಟದಲ್ಲಿ ನಮಗೆ ಬೆಂಬಲ ಸಿಕ್ಕಿಲ್ಲ, ತುಳು ಭಾಷೆ ಬಗ್ಗೆ ಚರ್ಚೆ ಆದಾಗ ಆ ಭಾಗದ ಶಾಸಕರು ತಮಾಷೆ ಮಾಡಿದ್ದರು. ಎತ್ತಿನ ಹೊಳೆ ಅವೈಜ್ಞಾನಿಕ ಎಂದು ಗೊತ್ತಿದ್ದರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಹೀಗಾಗಿ ಬಂದ್‌ಗೆ ನಮ್ಮ ನೈತಿಕ ಬೆಂಬಲ ಮಾತ್ರವೇ ಇದೆ. ಬಸ್‌ಗಳ ಓಡಾಟವೂ ಎಲ್ಲವೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.
ಎಂದಿನಂತೆ ಶಾಲಾ-ಕಾಲೇಜುಗಳ ಕಾರ್ಯಾಚರಣೆ: ಡಿಸಿ
ಕಾವೇರಿ ನೀರಿನ ವಿಚಾರದಲ್ಲಿ ಕನ್ನಡ ಸಂಘಟನೆಗಳು ಸೆ.29ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದರೂ ಕೂಡ ದ.ಕ. ಜಿಲ್ಲೆಯಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ಕಾರ್ಯಾಚರಿಸಲಿವೆ. ಸರಕಾರಿ ಕಾಲೇಜುಗಳು ಕೂಡ ಸೆ.29ರಂದು ತೆರೆದಿರುತ್ತವೆ ಎಂದು ದ.ಕ.ಜಿಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಬಂದ್ ಕರೆಗೆ ದ.ಕ.ಜಿಲ್ಲೆಯಲ್ಲಿ ಯಾವುದೇ ಸ್ಪಂದನ ಸಿಕ್ಕಿಲ್ಲ. ಎಂದಿನಂತೆ ಸಹಜ ಪ್ರಕ್ರಿಯೆ ಮುಂದುವರಿಯಲಿದೆ. ಸರಕಾರಿ ಮತ್ತು ಖಾಸಗಿ ಬಸ್ ಸಂಚಾರವಿರಲಿದ್ದು, ಜನಸಾಮಾನ್ಯರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.