ರಾಜ್ಯಪಾಲರ ಹುದ್ದೆ ಏಜೆಂಟರಾಗಿ ಬಳಕೆ: ಮಂಜುನಾಥ ಭಂಡಾರಿ ಆರೋಪ

Update: 2024-08-17 13:11 GMT

ಮಂಗಳೂರು: ಕಳೆದ 10 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರವು 9 ರಾಜ್ಯಗಳಲ್ಲಿ ಸರಕಾರವನ್ನು ಅಸ್ಥಿರಗೊಳಿಸುವ ಕಾರ್ಯ ಮಾಡಿದ್ದು, ಇದೀಗ ಕರ್ನಾಟಕದಲ್ಲಿಯೂ ಆ ಕಾರ್ಯಕ್ಕಾಗಿ ರಾಜ್ಯಪಾಲರ ಹುದ್ದೆಯನ್ನು ಏಜೆಂಟರಾಗಿ ಬಳಕೆ ಮಾಡಿದೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆ ಯಾದ ಜನಪ್ರಿಯ ನಾಯಕನನ್ನು ಷಡ್ಯಂತ್ರ ರೂಪಿಸಿ ಪ್ರಾಸಿಕ್ಯೂಶನ್‌ಗೆ ಒಳಪಡಿಸುವುದು ರಾಜ್ಯಪಾಲರ ಹುದ್ದೆಗೆ ಅವ ಮಾನ. ಮುಖ್ಯಮಂತ್ರಿಯ ರಾಜೀನಾಮೆ ಕೇಳುವ ಬಿಜೆಪಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಮೂಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈಗಾಗಲೇ ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ಆಯೋಗ ರಚನೆ ಆಗಿದೆ. ಆದರೂ ಈ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಐದು ಗ್ಯಾರಂಟಿ ಜಾರಿಗಳ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಬಂದ ಬಿಜೆಪಿ, ಸರಕಾರ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದೆ ರಾಜ್ಯಪಾಲರನ್ನು ಬಳಸಿಕೊಂಡು ಸರಕಾರವನ್ನು ಅಸ್ಥಿರ ಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಘನತೆಯ ಹುದ್ದೆಯಲ್ಲಿರುವ ರಾಜ್ಯಪಾಲರು ದೂರಿನ ಪೂರ್ವಾಪರ ನೋಡದೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅಣತಿಯಂತೆ ಕಾರ್ಯನಿರ್ವಹಿಸಿದ್ದಾರೆ.

ಕೇಂದ್ರ ಸಚಿವ ಕುಮಾರ ಸ್ವಾಮಿ ವಿರುದ್ಧ ಲೋಕಾಯುಕ್ತ ವರದಿ ನೀಡಿ 9 ತಿಂಗಳಾದರೂ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಮುಂದಾಗಿಲ್ಲ. ಶಶಿಕಲಾ ಜೊಲ್ಲೆ, ಮುರುಗೇಶ್ ಪ್ರಕರಣದಲ್ಲೂ ಮಾತನಾಡದ ರಾಜ್ಯಪಾಲರು, ಖಾಸಗಿ ವ್ಯಕ್ತಿಯೊಬ್ಬರ ದೂರಿನ ಮೇರೆಗೆ 24 ಗಂಟೆಯಲ್ಲಿ ನೋಟೀಸು ನೀಡಿ ವಾರದಲ್ಲೇ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರು ವುದು ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವಾಗಿದೆ. ಕಾಂಗ್ರೆಸ್ ಪಕ್ಷ, ಪಕ್ಷದ ಕಾರ್ಯಕರ್ತರು ಅವರ ಜತೆಗಿದ್ದಾರೆ ಎಂದು ಹೇಳಿದ ಮಂಜುನಾಥ ಭಂಡಾರಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಸುನಿಲ್ ಕುಮಾರ್ ಅವರಿಗಿಲ್ಲ ಎಂದರು.

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯಿಂದ ಇನ್ನೂ 20 ವರ್ಷಗಳ ರಾಜ್ಯದಲ್ಲಿ ಕಾಂಗ್ರೆಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿ, ಮುಖ್ಯಮಂತ್ರಿಯನ್ನು ದುರ್ಬಲಗೊಳಿಸಿ ಸರಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸಿದೆ. ಚೆಕ್‌ನಲ್ಲಿ ಲಂಚ ಪಡೆದ, ಬದಲಿ ಭೂಮಿ ನೀಡದೆ ಸೈಟ್ ಪಡೆದವರೂ ಇರುವಾಗ, ತಮ್ಮ ಭೂಮಿಗಾಗಿ ಬದಲಿ ಸೈಟ್ ಪಡೆದ ಸಿದ್ಧರಾಮಯ್ಯರ ಪತ್ನಿ ಪ್ರಕರಣದಲ್ಲಿ ರಾಜ್ಯಪಾಲರನ್ನು ಕೈಗೊಂಬೆಯಾಗಿಸಿ ರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದರು.

ಕಾಂಗ್ರೆಸ್‌ಗೆ ರಾಜ್ಯದಲ್ಲಿ 136 ಸ್ಥಾನ ದೊರಕಿದಾಗಿನಿಂದ ಬಿಜೆಪಿ ಒಂದಿಲ್ಲೊಂದು ಷಡ್ಯಂತ್ರಗಳನ್ನು ನಡೆಸುತ್ತಾ ಬಂದಿದೆ. ಯಾವುದೇ ರೀತಿಯಿಂದಲಾದರೂ ಅಧಿಕಾರ ಪಡೆಯುವ ಆಸೆಯಿಂದ ಇದೀಗ ರಾಜ್ಯಪಾಲರ ಮೂಲಕ ಸಿದ್ಧರಾಮಯ್ಯರ ವಿರುದ್ಧ ಪ್ರಾಸಿಕ್ಯೂಶನ್‌ಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ. ರಾಜ್ಯಪಾಲರು ರಾಜಧರ್ಮ ಪಾಲಿಸಬೇಕೇ ಹೊರತು ರಾಜಕೀಯ ಧರ್ಮವನ್ನಲ್ಲ. ಸಿದ್ಧರಾಮಯ್ಯ ಜತೆ ನಾವಿದ್ದೇವೆ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಗೋಷ್ಟಿಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ಜೆ. ಅಬ್ದುಲ್‌ಸಲೀಂ, ನೀರಜ್‌ಪಾಲ್, ಸುಭಾಶ್ಚಂದ್ರ ಶೆಟ್ಟಿ, ಟಿ.ಕೆ. ಸುಧೀರ್, ಲಾರೆನ್ಸ್‌ಡಿಸೋಜಾ, ತನ್ವೀರ್ ಶಾ, ಶುಭೋದಯ ಆಳ್ವ, ಪ್ರೇಮ್ ಬಳ್ಳಾಲ್‌ಬಾಗ್, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News