ಅಕ್ಟೋಬರ್‌ನೊಳಗೆ ಮಂಗಳೂರಿನಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ: ಸಂಸದ ನಳಿನ್ ಕುಮಾರ್

Update: 2023-09-22 16:29 GMT

ಮಂಗಳೂರು: ಅಕ್ಟೋಬರ್ ತಿಂಗಳ ಅಂತ್ಯದೊಳಗೆ ನಗರದಿಂದ ಗೋವಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಶುಕ್ರವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಈ ಭರವಸೆ ಲಭಿಸಿದೆ. ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿನ್‌ವರೆಗೆ ವಿಸ್ತರಿಸುವಂತೆ ಕೇರಳಿಗರ ಮನವಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸದಂತೆ ಒತ್ತಾಯಿಸಿರುವೆ. ಇದಕ್ಕೂ ಸಚಿವರು ಸ್ಪಂದಿಸಿದ್ದು, ಅಂತಹ ಯಾವುದೇ ಪ್ರಸ್ತಾವನೆಗೆ ಒಪ್ಪಿಗೆ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಎಂದು ನಳಿನ್ ತಿಳಿಸಿದ್ದಾರೆ.

ಪ್ರತಿ ದಿನ ಮುಂಜಾನೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು ಮಂಗಳೂರಿಗೆ ಹಾಗೂ ಸಂಜೆ ಮಂಗಳೂರಿನಿಂದ ಸುಬ್ರಹ್ಮಣ್ಯ ರಸ್ತೆಗೆ ಪ್ಯಾಸೆಂಜರ್ ರೈಲು ಒದಗಿಸಲು ಒಪ್ಪಿಗೆ ಸಿಕ್ಕಿದೆ. ರೈಲ್ವೆ ಇಲಾಖೆಯನ್ನು ಕೇರಳ ಹಿಡಿತದಿಂದ ತಪ್ಪಿಸಲು ದಕ್ಷಿಣ ರೈಲ್ವೆಯ ಪಾಲಕ್ಕಾಡು ವಿಭಾಗದಲ್ಲಿರುವ ದ.ಕ. ಜಿಲ್ಲೆಯ ಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರಿಸಬೇಕೆಂಬ ಮನವಿಗೆ ಸಚಿವರು ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ದಕ್ಷಿಣ ರೈಲ್ವೆ ಹಾಗೂ ಕೊಂಕಣ ರೈಲ್ವೆಗಳ ವಿಭಾಗಳ ನಡುವೆ ಸಂಚರಿಸುವ ರೈಲುಗಳ ಅನಗತ್ಯ ವಿಳಂಬವನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿರುವುದಾಗಿ ನಳಿನ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News