"ವಿವೇಕಾನಂದರ ಮಾತುಗಳು ಯುವಕರಿಗೆ ಇಂದಿಗೂ ಸ್ಫೂರ್ತಿಯಾಗಿದೆ"

Update: 2023-11-18 12:05 GMT

ಮಂಗಳೂರು : ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸುತ್ತಿದ್ದೇವೆ. ವಿವೇಕಾನಂದರು ಯುವಕರ ಮೇಲೆ ಅಪಾರ ಭರವಸೆಯನ್ನಿಟ್ಟಿದ್ದರು. ಅವರ ಮಾತುಗಳು ಯುವಕರಿಗೆ ಇಂದಿಗೂ ಸ್ಫೂರ್ತಿಯಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತ ಕಾಮಾನಂದಜಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಜಂಟಿ ಆಶ್ರಯದಲ್ಲಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ವಿವೇಕ ಜಾಗೃತಿ ಸರಣಿ ಉಪನ್ಯಾಸದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಕ್ಷಣವೆಂದರೆ ಕೇವಲ ಪುಸ್ತಕದ ವಿಷಯಗಳ ಕಲಿಕೆಯಲ್ಲ. ಅದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗ ಬೇಕು. ಇಂತಹ ಶಿಕ್ಷಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಸ್. ಆರ್. ಲೀಲಾ ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವುಮೆನ್ಸ್ ನ್ಯಾಷನಲ್‌ಎಜುಕೇಷನ್ ಸೊಸೈಟಿ ಅಧ್ಯಕ್ಷ ಮನೆಲ್ ಅಣ್ಣಪ್ಪ ನಾಯಕ್ ವಹಿಸಿದ್ದರು. ವುಮೆನ್ಸ್ ನ್ಯಾಷನಲ್‌ ಎಜುಕೇಷನ್ ಸೊಸೈಟಿ ಉಪಾಧ್ಯಕ್ಷ ಡಾ. ಮಂಜುಳಾ ಕೆ. ಟಿ. ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಂಗಳೂರಿನ ಬೆಸೆಂಟ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಪ್ರೊ. ರಾಜಶೇಖರ್ ಹೆಬ್ಬಾರ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್‌ಕುಮಾರ್ ಕೆ.ಸಿ, ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಶ್ಯಾಮ್‌ಕಾಮತ್, ನಿವೃತ್ತ ಯೋಧ ಬೆಳ್ಳಾಲ ಗೋಪಿನಾಥ್‌ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಸೆಂಟ್ ಮಹಿಳಾ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಂಗಳೂರು ರಾಮಕೃಷ್ಣ ಮಿಷನ್‌ನ ಯುವ ಕಾರ್ಯಕ್ರಮಗಳ ಮುಖ್ಯ ಸಂಯೋಜಕ ರಂಜನ್ ಬೆಳ್ಳಾರ್ಪ್ಪಾಡಿ ಸ್ವಾಗತಿಸಿದರು. ಬೆಸೆಂಟ್ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ವಿಪ್ರಭಾ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News