ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ‘ವಾಕಥಾನ್ ’

Update: 2023-09-17 16:05 GMT

ಮಂಗಳೂರು, ಸೆ.17: ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಾಗೂ ಮಹಿಳೆಯರ ಹೃದಯದ ಆರೋಗ್ಯ ಕುರಿತಂತೆ ಗಮನ ಸೆಳೆಯಲು 2 ಕಿಲೋ ಮೀಟರ್ ದೂರದ ವುಮೆನ್ ಆನ್ ವಾಕ್ ‘ವಾಕಥಾನ್ ’ ಕಾರ್ಯಕ್ರಮವನ್ನು ರವಿವಾರ ಬೆಳಗ್ಗೆ ನಗರದಲ್ಲಿ ಆಯೋಜಿಸಲಾಗಿತ್ತು.

ವಾಕಥಾನ್‌ಗೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯಿಂದ ಚಾಲನೆ ನೀಡಲಾಯಿತು. ಕಾಪ್ರಿಗುಡ್ಡದ ಮರೇನಾ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ತನಕ ನಡಿಗೆ ಆಯೋಜಿಸಲಾಗಿತ್ತು.

ರಾಷ್ಟ್ರೀಯ ಮಟ್ಟದ ಅಥ್ಲೀಟ್ ವರ್ಷಾ ಅವರು ವಾಕಥಾನ್‌ನ ನೇತೃತ್ವ ವಹಿಸಿ ಜ್ಯೋತಿ ಹಿಡಿದು ಮುಂದೆ ಸಾಗಿದರು. ಮುಂಬರಲಿರುವ ವಿಶ್ವ ಹೃದಯ ದಿನದ ಭಾಗವಾಗಿ ಈ ವಾಕಥಾನ್ ಆಯೋಜಿಸಲಾಗಿದ್ದು, ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೆಸಲಾಯಿತು.ಈ ವಾಕಥಾನ್‌ನಲ್ಲಿ 1,000ಕ್ಕೂ ಅಧಿಕ ಮಂದಿ ಉತ್ಸಾಹದೊಂದಿಗೆ ಭಾಗವಹಿಸಿದ್ದರು.

ಮಹಿಳೆಯ ಹೃದಯ ಆರೋಗ್ಯ ಕೇವಲ ಆಕೆಗೆ ಮಾತ್ರವಲ್ಲದೆ, ಆಕೆಯ ಕುಟುಂಬಕ್ಕೆ ಅತ್ಯಂತ ಮುಖ್ಯವಾಗಿರುತ್ತದೆ ಎಂಬ ಸಂದೇಶವನ್ನು ಹರಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಯುವ ಮತ್ತು ಮಧ್ಯಮ ವಯಸ್ಸಿನ ಅನೇಕ ಮಹಿಳೆ ಯರು ಈ ವಾಕಥಾನ್‌ನಲ್ಲಿ ಭಾಗವಹಿಸಿದ್ದರು. ಹೃದಯದ ಆರೋಗ್ಯಕ್ಕಾಗಿ ಆಯೋಜಿಸಲಾದ ವುಮೆನ್ ಆನ್ ವಾಕ್‌ನಲ್ಲಿ ಭಾಗವಹಿಸಿದವರು ಕೆಂಪು ಬಣ್ಣದ ಉಡುಗೆಗಳನ್ನು ಧರಿಸಿದ್ದರು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ಅವರು ಈ ಕಾರ್ಯಕ್ರಮದಲ್ಲಿ ವಿಶ್ವ ಹೃದಯ ದಿನದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಆಶ್ರಯದಲ್ಲಿ ನಡೆದ ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಡಿ. ಕುಲಕರ್ಣಿ, ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈಯನ್ಸನ್ ಡೀನ್ ಡಾ. ಆಶಿತಾ ಉಪ್ಪೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಶೇಖರ್ ಅವರು ವಾಕಥಾನ್‌ನಲ್ಲಿ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಗೀರ್ ಸಿದ್ಧಿಕಿ, ಎಂಎಎಚ್‌ಇ, ಮಂಗಳೂರು ಕ್ಯಾಂಪಸ್‌ನ ಪ್ರೊ. ವಿಸಿ ಡಾ. ದಿಲೀಪ್ ಜಿ. ನಾಯಕ್, ಮಂಗಳೂರಿನ ಕೆಎಂಸಿಯ ಡೀನ್ ಡಾ. ಬಿ. ಉನ್ನಿಕೃಷ್ಣನ್, ಇಂಟರ್ವೆನ್ಷನಲ್ ಕಾರ್ಡಿಯಾಲಾಜಿಸ್ಟ್‌ಗಳಾದ ಡಾ. ಎಂ.ಎನ್. ಭಟ್, ಡಾ. ರಾಜೇಶ್ ಪೈ, ಕಾರ್ಡಿಯಾಕ್ ಎಲೆಕ್ಟ್ರೋಫಿಜಿಸಿಸ್ಟ್ ಡಾ. ಮನೀಶ್ ರೈ, ಕಾರ್ಡಿಯೋಥೊರಾಕಿಕ್ ಮತ್ತು ವಾಸ್ಕ್ಯೂಲಾರ್ ಶಸ್ತ್ರಕ್ರಿಯಾ ತಜ್ಞರಾದ ಡಾ. ಮಾಧವ್ ಕಾಮತ್ ಮತ್ತು ಡಾ. ಸೂರಜ್ ಪೈ, ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ಶಸ್ತ್ರಕ್ರಿಯಾ ತಜ್ಞರಾದ ಡಾ. ಹರೀಶ್ ರಾಘವನ್ ಮತ್ತು ಡಾ. ಐರೇಶ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧ ವಿಭಾಗಗಳ ಮುಖ್ಯಸ್ಥರು, ಆಸ್ಪತ್ರೆ ಆಡಳಿತ ಮತ್ತು ಸಿಬ್ಬಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಹೃದಯ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಉಪಕ್ರಮದಲ್ಲಿ ಹಲವಾರು ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳು, ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಕೆಎಂಸಿ ಆಸ್ಪತ್ರೆ ರೆಡ್ ಎಫ್‌ಎಂ ಸಹಯೋಗದಲ್ಲಿ ನಡೆಸುತ್ತಿರುವ ಹೃದಯ ಆರೋಗ್ಯ ಜಾಗೃತಿ ಕುರಿತ ಹಾರ್ಟ್ಬೀಟ್ ಕ್ವಿಜ್ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಾಕಥಾನ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ನೀಡಲಾಯಿತು. ಅತ್ಯುತ್ತಮ ಶ್ಲೋಗನ್(ಘೋಷವಾಕ್ಯ) ಮತ್ತು ಅತ್ಯುತ್ತಮ ಭಿತ್ತಿಪತ್ರ ಮುಂತಾದ ಬಹುಮಾನಗಳನ್ನು ಕಾರ್ಯಕ್ರಮದ ನಂತರ ನೀಡಲಾಯಿತು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News