ವಕ್ಫ್ ತಿದ್ದುಪಡಿ ಮಸೂದೆ ಕೇಂದ್ರ ಸರಕಾರದ ದಬ್ಬಾಳಿಕೆ: ದಿನೇಶ್ ಗುಂಡೂರಾವ್

ಮಂಗಳೂರು, ಎ.5: ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯ ಜಾರಿಗೊಳಿಸಲು ಮುಂದಾಗಿರುವುದು ಕೇಂದ್ರ ಸರಕಾರದ ದಬ್ಬಾಳಿಕೆಯಾಗಿದ್ದು, ಇಂತಹ ಸೂಕ್ಷ್ಮ ವಿಚಾರದಲ್ಲಿ ದ್ವೇಷ ಸಾಧಿಸುವುದು ಸರಿಯಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ನಲ್ಲಿ ತಪ್ಪಾಗಿದ್ದರೆ ಅಥವಾ ಭೂಮಿ ದುರುಪಯೋಗ ಆಗಿದ್ದರೆ ಅದು ಬೇರೆ ವಿಚಾರ. ಆದರೆ ಕಾನೂನಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸರಕಾರದ್ದು ಸಂವಿಧಾನ ವಿರೋಧಿ ನಡೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹಿಂದೂ ಧರ್ಮದ ಟ್ರಸ್ಟ್ ಗಳು ಕೂಡಾ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿವೆ. ವಕ್ಫ್ ಕೂಡಾ ಕೆಲವು ರಜ್ಯ ಸರಕಾರದ ವ್ಯಾಪ್ತಿಯಲ್ಲಿವೆ. ಆದರೆ ಈ ರೀತಿಯ ಕ್ರಮಗಳು ಭ್ರಷ್ಟಾಚಾರದಿಂದ ಕೂಡಿವೆ ಎಂದು ಅವರು ಆಕ್ಷೇಪಿಸಿದರು.
ಮಡಿಕೇರಿ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದರ ಬಗ್ಗೆ ಮಾಇಹಿತಿ ಇಲ್ಲ. ಯಾವುದೇ ಪ್ರಕರಣವನ್ನು ಕಾನೂನು ಪ್ರಕಾರವೇ ತೆಗೆದುಕೊಳ್ಳಬೇಕಾಗತ್ತದೆ ಎಂದರು.
ಕೋವಿಡ್ ಅಕ್ರಮಗಳ ಬಗ್ಗೆ ನ್ಯಾ. ಡಿ ಕುನ್ಹಾ ವರದಿ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಉಪಸ್ಥಿತಿಯಲ್ಲಿ ಚರ್ಚೆಗಳಾಗಿವೆ. ಇಲಾಖೆಗಳಲ್ಲಿ ವಿಚಾರಣೆಗೆ ತಿಳಿಸಲಾಗಿತ್ತು. ನಮ್ಮ ಇಲಾಖೆಯಲ್ಲಿ ಶೋಕಾಸ್ ನೋಟೀಸ್ ಕೊಟ್ಟು ವಿಚಾರಣೆಗೆ ಸೂಚಿಸಲಾಗಿತ್ತು. ಎಲ್ಲಾ ವಿಚಾರಣೆ ಆದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಬಾವುಟಗುಡ್ಡದ ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕರಾವಳಿಯ ಸ್ವಾತಂತ್ರ್ಯ ಸಂಗ್ರಾಮದ ನಾಯಕರಾಗಿದ್ದ ರಾಮಯ್ಯ ಗೌಡ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಬಾವುಟಗುಡ್ಡದಲ್ಲಿ ಸ್ವಾತಂತ್ರ್ಯ ಬಾವುಟ ಹಾರಾಡಿಸಿದ್ದರು. ಜಿಲ್ಲೆಯಿಂದ ಬ್ರಿಟಿಷರನ್ನು ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.