'ಪೆನ್ ಡ್ರೈವ್' ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹ: ಮಂಗಳೂರಿನಲ್ಲಿ ಮಹಿಳೆಯರ ಧರಣಿ

Update: 2024-05-22 10:36 GMT

ಮಂಗಳೂರು: ‘ಪೆನ್ ಡ್ರೈವ್’ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ನಗರದ ಜ್ಯೋತಿ ಸರ್ಕಲ್ ಬಳಿ ಮಂಗಳವಾರ ಸಂಜೆ ಧರಣಿ ನಡೆಯಿತು.

ಕಪ್ಪು ಉಡುಪಿನಲ್ಲಿ ಕಾಣಿಸಿಕೊಂಡು ಮಹಿಳೆಯರು, ಲೈಂಗಿಕ ಹಗರಣ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು, ಐಟಿ ಕಾಯ್ದೆ, ಐಪಿಸಿ ಕಾಯ್ದೆಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು, ಜಾಮೀನು ಮೂಲಕ ಹೊರಬಂದಿರುವ ಶಾಸಕ ಎಚ್.ಡಿ.ರೇವಣ್ಣರಿಗೆ ನೀಡಿರುವ ಜಾಮೀನು ರದ್ದುಪಡಿಸಬೇಕು, ಈ ಹಗರಣದ ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣವಾಗಬೇಕು, ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿಯಾದವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು. ಬಿಜೆಪಿ ನಾಯಕ ಬಿ.ದೇವರಾಜ ಗೌಡ ಮತ್ತು ಕಾರ್ತಿಕ್ ಗೌಡ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಬೇಕು, ಎಸ್ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್.ಡಿ.ರೇವಣ್ಣ ಅವರ ವಿಧಾನಸಭಾ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಸರಕಾರಕ್ಕೆ ಮಹಿಳೆಯರು ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರು, ಅವರು ಪ್ರತಿವರ್ಷ ವಿಮೆನ್ಸ್ ದಿನದಂದು ಕಪ್ಪು ಹುಡುಪಿನಲ್ಲಿ ಸಾಂಕೇತವಾಗಿ ಮಹಿಳೆಯರು ನಿಲ್ಲುತ್ತಾರೆ. ಆದರೆ ದುರದೃಷ್ಟಕರ ವಿಚಾರವೆಂದರೆ ಮಹಿಳೆಯರು ಮತ್ತೆ ಮತ್ತೆ ತಮ್ಮ ದುಃಖ, ನೋವನ್ನು ಹೇಳಿಕೊಳ್ಳಲು ಕಪ್ಪು ಉಡುಪಿನಲ್ಲಿ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ವರ್ತಮಾನದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಹಿಂಸೆ ದೌರ್ಜನ್ಯ ನಿಲ್ಲಬೇಕು . ಸರಕಾರ ಮಹಿಳೆಗೆ ಬರೇ ಯೋಜನೆಗಳನ್ನು ಕೊಟ್ಟರೆ ಮಾತ್ರ ಸಾಲದು.ರಕ್ಷಣೆ ನೀಡಬೇಕು. ಅಧಿಕಾರದ ಬಲದಿಂದ ನಡೆಯುವ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ , ಹಿಂಸೆ ನಿಲ್ಲಬೇಕು. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಹೆಣ್ಣು ಮಕ್ಕಳಿಗೆ ಆಯ್ಕೆ ಸ್ವಾತಂತ್ರ್ಯ ಇಲ್ಲದಾಗಿದೆ. ಹೆಣ್ಣು ಮಕ್ಕಳು ತಮ್ಮ ಮನೆಗಳಲ್ಲೇ ಕೊಲೆಯಾಗುತ್ತಿದ್ದಾರೆ. ಯಾರ ಮನೆಗಳಿಗೆ ಹೋಗುತ್ತಾರೊ ಅಲ್ಲಿ ಅವರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೆ ಬದುಕುವುದು ಕಷ್ಟಕರವಾಗಿದೆ. ಆಕೆಗೆ ರಕ್ಷಣೆ ಇಲ್ಲದಾಗಿದೆ ಎಂದು ಡಾ. ಜ್ಯೋತಿ ಆತಂಕ ವ್ಯಕ್ತಡಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆ ಮರ್ಲಿನ್ ಮಾರ್ಟಿಸ್ ಮಾತನಾಡಿ, ಹಾಸನದಲ್ಲಿ ನಡೆದಿರುವುದು ಮಹಿಳೆಯರ ಮೇಲಿನ ದೊಡ್ಡ ಮಟ್ಟದ ದೌರ್ಜನ್ಯವಾಗಿದೆ. ದೌರ್ಜನ್ಯ ನಡೆಸಿದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳಬೇಕು. ಸರಕಾರ ಮಹಿಳೆಯರಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆ ಹಾಗೂ ಅನುಪಮಾ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ. ಮಾತನಾಡಿ, ಹಾಸನದಲ್ಲಿ ಸಂತೃಸ್ತ ಮಹಿಳೆಯರಿಗೆ ತಮ್ಮ ನೋವನ್ನು ವ್ಯಕ್ತಪಡಿಸಲು ಸರಕಾರ ಅವರಿಗೆ ರಕ್ಷಣೆ ಮಾಡಬೇಕು. ಆರೋಪಿ ಪ್ರಜ್ವಲ್ ರೇವಣ್ಣನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಧರಣಿಯಲ್ಲಿ ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯರಾದ ದೇವಿಕಾ ನಾಗೇಶ್, ಗುಲಾಬಿ ಬಿಳಿಮಲೆ, ಹರಿಣಿ, ನಳಿನಿ, ಮಂಜುಳಾ, ಪದ್ಮಾ, ಸುಮಯ, ಜಮಾಅತೆ ಇಸ್ಲಾಮೀ ಹಿಂದ್ನ ಮಹಿಳಾ ವಿಭಾಗದ ದ.ಕ. ಜಿಲ್ಲಾ ಪ್ರಮುಖರಾದ ಸಾಜಿದಾ ಮೂಮಿನ್, ಸುಮಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News