ಲೋಕಸಭಾ ಚುನಾವಣೆ ನಂತರ ನಿಮ್ಮ ಮೊಬೈಲ್ ಬಿಲ್ ಶೇ.25ರಷ್ಟು ಹೆಚ್ಚಬಹುದು: ವರದಿ
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಬಳಿಕ ಶೀಘ್ರವೇ ದೇಶಾದ್ಯಂತ ಮೊಬೈಲ್ ಫೋನ್ ಬಳಕೆದಾರರು ಹೆಚ್ಚಿನ ಮೊಬೈಲ್ ಬಿಲ್ ಗಳನ್ನು ಪಾವತಿಸಲಿದ್ದಾರೆ. ದೂರಸಂಪರ್ಕ ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ನಾಲ್ಕನೇ ಸುತ್ತಿನ ದರ ಏರಿಕೆಗೆ ಸಜ್ಜಾಗುತ್ತಿದ್ದು, ತನ್ಮೂಲಕ ಪ್ರತಿ ಬಳಕೆದಾರರಿಗೆ ತಮ್ಮ ಸರಾಸರಿ ಆದಾಯ (ಎಆರ್ಪಿಯು)ವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲು ಹವಣಿಸುತ್ತಿವೆ ಎಂದು The Economic Times ವರದಿ ಮಾಡಿದೆ.
ಏರಿಕೆ ಹಿಂದಿನ ಕಾರಣಗಳು
ಮಾಧ್ಯಮ ವರದಿಯಂತೆ ದೂರಸಂಪರ್ಕ ಕಂಪನಿಗಳು ದರಗಳನ್ನು ಅಂದಾಜು ಶೇ.25ರಷ್ಟು ಏರಿಸಲು ಯೋಜಿಸಿವೆ. ಸ್ಥಿರವಾದ ಸ್ಪರ್ಧಾತ್ಮಕ ಮಾರುಕಟ್ಟೆ ವಾತಾವರಣ ಸೃಷ್ಟಿ,5ಜಿ ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆಗಳ ಬಳಿಕ ಲಾಭವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಮತ್ತು ಈ ಕಂಪನಿಗಳಿಗೆ ಸರಕಾರದ ಬೆಂಬಲ ದರ ಏರಿಕೆಗೆ ಕಾರಣವಾಗಿವೆ.
ಗ್ರಾಹಕರ ಮೇಲೆ ಪರಿಣಾಮ
ಶೇ.25ರಷ್ಟು ಹೆಚ್ಚಳವು ಗಾಬರಿ ಮೂಡಿಸುವಂತಿದ್ದರೂ,ಏರಿಕೆಯು ನಗರ ಮತ್ತು ಗ್ರಾಮೀಣ ಬಳಕೆದಾರರು ಸಹಿಸುವಂತಿರಬೇಕು ಎಂದು ವರದಿಯು ಸೂಚಿಸಿದೆ. ಗಮನಾರ್ಹವಾಗಿ ಪ್ರಸ್ತುತ ನಗರ ಕುಟುಂಬಗಳ ಒಟ್ಟು ವೆಚ್ಚದ ಶೇ.3.2ರಷ್ಟಿರುವ ಮೊಬೈಲ್ ಬಿಲ್ಗಳ ವೆಚ್ಚ ದರ ಹೆಚ್ಚಳದ ಬಳಿಕ ಶೇ.3.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಗ್ರಾಮೀಣ ಬಳಕೆದಾರರಿಗೆ ಇದು ಶೇ.5.2ರಿಂದ ಶೇ.5.9ಕ್ಕೆ ಹೆಚ್ಚಬಹುದು.
ಕಂಪನಿಗಳಿಗೆ ಆದಾಯ ಬೆಳವಣಿಗೆ
ಪ್ರಮುಖ ದರಗಳಲ್ಲಿ ನಿರೀಕ್ಷಿತ ಏರಿಕೆಯಿಂದ ದೂರಸಂಪರ್ಕ ಕಂಪನಿಗಳು ಎಆರ್ಪಿಯುನಲ್ಲಿ ಶೇ.16ರಷ್ಟು ಹೆಚ್ಚಿನ ಆದಾಯವನ್ನು ಗಳಿಸಲಿವೆ. ಭಾರ್ತಿ ಏರ್ಟೆಲ್ 29 ರೂ. ಮತ್ತು ಜಿಯೊ 26 ರೂ.ಗಳಷ್ಟು ದರವನ್ನು ಹೆಚ್ಚಿಸಬಹುದು ಎಂದು ಎಕ್ಸಿಸ್ ಕ್ಯಾಪಿಟಲ್ ಅಂದಾಜಿಸಿದೆ.
5ಜಿ ಹೂಡಿಕೆಗಳ ನಗದೀಕರಣ
ಬಂಡಲ್ಡ್ ಪ್ಯಾಕ್ ಗಳ ದರ ಹೆಚ್ಚಳದ ಮೂಲಕ 5ಜಿ ತಂತ್ರಜ್ಞಾನದಲ್ಲಿ ತಮ್ಮ ಬಂಡವಾಳ ವೆಚ್ಚ ಹೂಡಿಕೆಗಳ ಮೇಲೆ ಲಾಭಗಳನ್ನು ಗಳಿಸಲು ಕಂಪನಿಗಳು ಸಜ್ಜಾಗಿವೆ. ಡೆಲೊಯ್ಟ್ ,ಸೌಥ ಏಶ್ಯಾ ಅಧಿಕಾರಿ ಪಿಯೂಷ್ ವೈಶ್ ಅವರು ಎಆರ್ಪಿಯುಗಳಲ್ಲಿ ಶೇ.10ರಿಂದ ಶೇ.15ರಷ್ಟು ಹೆಚ್ಚಳವನ್ನು ನಿರೀಕ್ಷಿಸಿದ್ದು,ಕ್ಯಾಲೆಂಡರ್ ವರ್ಷದ ಅಂತ್ಯದಲ್ಲಿ ಪ್ರತಿ ಬಳಕೆದಾರನಿಂದ ಹೆಚ್ಚುವರಿಯಾಗಿ ಸುಮಾರು 100 ರೂ.ಗಳಷ್ಟು ಆದಾಯವನ್ನು ಕಂಪನಿಗಳು ಗಳಿಸಬಹುದು ಎಂದು ಅಂದಾಜಿಸಿದಾರೆ. 4ಜಿ/5ಜಿ ಬಂಡಲ್ಡ್ ಪ್ಯಾಕ್ಗಳಲ್ಲಿ ದರ ಹೊಂದಾಣಿಕೆಗಳು ಮತ್ತು ಕ್ರಮೇಣ ಕಡಿಮೆ ಮೌಲ್ಯದ ಪ್ಯಾಕ್ ಗಳನ್ನು ತೆಗೆದುಹಾಕುವ ಮೂಲಕ ಈ ಆದಾಯ ಇನ್ನಷ್ಟು ಹೆಚ್ಚಬಹುದು ಎಂದು ಅಭಿಪ್ರಾಯಿಸಿದ್ದಾರೆ.
ದರ ಹೆಚ್ಚಳಗಳ ಹೊರತಾಗಿಯೂ ಗ್ರಾಹಕ ನಿಷ್ಠೆ ಮಹತ್ವದ ಅಂಶವಾಗಿ ಉಳಿಯುತ್ತದೆ. ವೇಗದ ಸಂಪರ್ಕ ಲಭ್ಯವಿರುವವರೆಗೂ ಗ್ರಾಹಕರು ದೂರಸಂಪರ್ಕ ಸೇವೆಗಳಿಗೆ ಸಂಬಂಧಿಸಿದ ಹೆಚ್ಚಿನ ವೆಚ್ಚವನ್ನು ಭರಿಸಲು ಸಿದ್ಧರಿರುತ್ತಾರೆ. ದೂರಸಂಪರ್ಕ ಕಂಪನಿಗಳು ಮೌಲ್ಯಯುತ ಸೇವೆಗಳನ್ನು ಒದಗಿಸುವವರೆಗೂ ಗ್ರಾಹಕರು ಅವುಗಳಿಂದ ದೂರ ಸರಿಯುವ ಸಾಧ್ಯತೆಗಳು ಕಡಿಮೆ.
ದರ ಏರಿಕೆಯ ಫಲಾನುಭವಿಗಳು
ಮೊಬೈಲ್ ಶುಲ್ಕಗಳ ಏರಿಕೆಯಿಂದ ಭಾರ್ತಿ ಏರ್ಟೆಲ್ ಮತ್ತು ಜಿಯೊ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿವೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ತಮ್ಮ ಅತ್ಯುತ್ತಮ ಮೂಲಸೌಕರ್ಯ ಮತ್ತು ವ್ಯಾಪಕ ನೆಟ್ವರ್ಕ್ ಕವರೇಜ್ನೊಂದಿಗೆ ಈ ಪ್ರಮುಖ ಟೆಲಿಕಾಂ ಕಂಪನಿಗಳು ದರ ಏರಿಕೆಯ ಲಾಭವನ್ನು ಪಡೆದುಕೊಳ್ಳಲಿವೆ ಮತ್ತು ತಮ್ಮ ಮಾರುಕಟ್ಟೆ ಸ್ಥಾನಗಳನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲಿವೆ.