ನಿಯಮ ಉಲ್ಲಂಘಿಸಿದರೆ 1 ಕೋ.ರೂ. ದಂಡ
ಅಂಬಾಲ: ಶಾಸನಾತ್ಮಕ ನಿಬಂಧನೆಗಳು ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಗಳನ್ನು ಅನುಸರಿಸದೇ ಇರುವ ವೈದ್ಯಕೀಯ ಕಾಲೇಜುಗಳಿಗೆ 1 ಕೋ.ರೂ. ದಂಡ ವಿಧಿಸಬಹುದು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆಯ ನೂತನ ನಿಯಮ ಹೇಳಿದೆ.
ರೋಗಿಗಳ ದಾಖಲೆಗಳು ಸೇರಿದಂತೆ ಸುಳ್ಳು ಘೋಷಣೆ ಮಾಡಿದ, ದಾಖಲೆಗಳನ್ನು ನೀಡಿದ ಬೋಧಕ ವರ್ಗ, ವಿಭಾಗದ ಮುಖ್ಯಸ್ಥರು, ಡೀನ್, ನಿರ್ದೇಶಕರು, ವೈದ್ಯರಿಗೆ 5 ಲಕ್ಷ ರೂ. ದಂಡ ವಿಧಿಸಬಹುದು.
ಅಲ್ಲದೆ, ನೋಂದಾಯಿತ ವೈದ್ಯಕೀಯ ವೃತ್ತಿಪರರ (ವೃತ್ತಿಪರ ನಡವಳಿಕೆ) ನಿಯಮಗಳು ಹಾಗೂ ವೈದ್ಯಕೀಯ ಶಿಕ್ಷಣದ ಗುಣಮಟ್ಟ ನಿರ್ವಹಣೆಯ ನಿಯಮ-೨೦೨೩ರ ಅಡಿಯಲ್ಲಿ ದುರ್ನಡತೆಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು ಅಥವಾ ದಂಡ ವಿಧಿಸಬಹುದು ಎಂದು ಸೆಪ್ಟಂಬರ್ ೨೭ರಂದು ಹೊರಡಿಸಲಾದ ಅಧಿಸೂಚನೆಯ ಈ ನೂತನ ನಿಯಮಗಳು ಹೇಳಿದೆ.
ಎನ್ಎಂಸಿಯ ಸಂಬಂಧಿತ ಮಂಡಳಿ ನಿಗದಿಪಡಿಸಿದ ಶಾಸನಾತ್ಮಕ ನಿಬಂಧನೆಗಳು ಹಾಗೂ ನಿಯಮಗಳನ್ನು ಅನುಸರಿಸಲು ವಿಫಲವಾಗುವ ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಆಯೋಗ 5 ವರ್ಷಗಳ ವರೆಗೆ ತಡೆ ಹಿಡಿಯಬಹುದು ಎಂದು ನಿಯಮಗಳು ಹೇಳಿವೆ.