ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಇಸ್ಕಾನ್

Update: 2023-09-29 14:26 GMT

ಮೇನಕಾ ಗಾಂಧಿ | Photo: PTI 

ಹೊಸದಿಲ್ಲಿ: ಇಸ್ಕಾನ್ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ ಇಸ್ಕಾನ್ ಶುಕ್ರವಾರ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ‘‘ಇಸ್ಕಾನ್ ವಿರುದ್ಧ ಮಾಡಿರುವ ಸಂಪೂರ್ಣ ಆಧಾರರಹಿತ ಆರೋಪಕ್ಕಾಗಿ ನಾವು ಇಂದು ಮೇನಕಾ ಗಾಂಧಿ ಅವರಿಗೆ 100 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದ್ದೇವೆ. ಈ ಮಾನಹಾನಿಕರ, ನಿಂದನೀಯ, ದುರುದ್ದೇಶಪೂರಿತ ಆರೋಪಗಳಿಂದ ಜಗತ್ತಿನಾದ್ಯಂತ ಇರುವ ಇಸ್ಕಾನ್ ಭಕ್ತರು, ಬೆಂಬಲಿಗರು ಹಾಗೂ ಹಿತೈಷಿಗಳಿಗೆ ತೀವ್ರ ನೋವುಂಟಾಗಿದೆ. ಇಸ್ಕಾನ್ ವಿರುದ್ಧದ ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದು ಇಸ್ಕಾನ್ ನ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ.

ತನ್ನ ಗೋಶಾಲೆಯಿಂದ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಇಸ್ಕಾನ್ ದೇಶದ ಅತಿ ದೊಡ್ಡ ವಂಚಕ ಎಂದು ಆರೋಪಿಸುವ ಮೇನಕಾ ಗಾಂಧಿ ಅವರ ವೀಡಿಯೊ ಸೆಪ್ಟಂಬರ್ 28ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಆರೋಪವನ್ನು ಇಸ್ಕಾನ್ ತೀವ್ರವಾಗಿ ವಿರೋಧಿಸಿತ್ತು. ಅಲ್ಲದೆ, ಇದು ಆಧಾರ ರಹಿತ ಹಾಗೂ ಸುಳ್ಳು ಆರೋಪ ಎಂದು ಹೇಳಿತ್ತು. ದಿನಾಂಕ ರಹಿತ ವೀಡಿಯೊದಲ್ಲಿ ಮೇನಕಾ ಗಾಂಧಿ, ‘‘ಇಸ್ಕಾನ್ ಗೋಶಾಲೆಯನ್ನು ಆರಂಭಿಸಿ ಭೂಮಿಯ ರೂಪದಲ್ಲಿ ಸರಕಾರದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದಿದೆ’’ ಎಂದು ಹೇಳಿದ್ದರು.

‘‘ಇಸ್ಕಾನ್ ತನ್ನ ಎಲ್ಲಾ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುತ್ತಿದೆ. ಇಸ್ಕಾನ್ ಕಸಾಯಿಖಾನೆಗೆ ಗೋವುಗಳನ್ನು ಮಾರಾಟ ಮಾಡಿದಷ್ಟು ಬೇರೆ ಯಾರೂ ಮಾರಾಟ ಮಾಡಿರಲಾರದು. ಅವರು ರಸ್ತೆಯಲ್ಲಿ ಸಾಗುತ್ತಾ ಹರೇ ರಾಮ್, ಹರೇಕೃಷ್ಣ ಎಂದು ಪಠಿಸುತ್ತಾರೆ. ನಮ್ಮ ಸಂಪೂರ್ಣ ಬದುಕು ಹಾಲನ್ನು ಅವಲಂಬಿಸಿದೆ ಎಂದು ಹೇಳುತ್ತಾರೆ’’ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯೂ ಆಗಿರುವ ಮೇನಕಾ ಗಾಂಧಿ ವೀಡಿಯೊದಲ್ಲಿ ಹೇಳಿದ್ದರು. ತಾನು ಆಂಧ್ರಪ್ರದೇಶದಲ್ಲಿರುವ ಇಸ್ಕಾನ್ನ ಗೋಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಗೋವು ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಕರುಗಳು ಇರಲಿಲ್ಲ. ಅಂದರೆ ಅವರು ಎಲ್ಲಾ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಿದ್ದಾರೆ ಎಂಬುದು ಅರ್ಥ ಎಂದು ಮೇನಕಾ ಗಾಂಧಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News