ಈ ಚುನಾವಣಾ ಋತುವಿನಲ್ಲಿ 1,006 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳ ಮಾರಾಟ
ಹೊಸದಿಲ್ಲಿ: ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಸಂದರ್ಭದಲ್ಲಿ, ನವೆಂಬರ್ 6ರಿಂದ 20ರವರೆಗೆ ಭಾರತೀಯ ಸ್ಟೇಟ್ ಬ್ಯಾಂಕ್ 1,006 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ.
ಈ ರಾಜ್ಯಗಳಲ್ಲಿ ಐದು ವರ್ಷಗಳ ಹಿಂದೆ ನಡೆದ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಚುನಾವಣಾ ಬಾಂಡ್ ಗಳ ಮೂಲಕ ಸಂಗ್ರಹಿಸಲಾದ ರಾಜಕೀಯ ದೇಣಿಗೆಗಳು 400 ಶೇಕಡದಷ್ಟು ಅಧಿಕವಾಗಿವೆ. 2018 ನವೆಂಬರ್ 1ರಿಂದ ನವೆಂಬರ್ 11ರವರೆಗಿನ ಅವಧಿಯಲ್ಲಿ 184.20 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲಾಗಿತ್ತು.
ನೀಡಲಾದ ಒಟ್ಟು ಚುನಾವಣಾ ಬಾಂಡ್ ಗಳ ಪೈಕಿ 89.9% ಒಂದು ಕೋಟಿ ರೂಪಾಯಿ ಮುಖಬೆಲೆಯಲ್ಲಿ ನೀಡಲಾಗಿದೆ. ಒಟ್ಟು 1,109 ಬಾಂಡ್ ಗಳನ್ನು ಖರೀದಿಸಲಾಗಿದೆ. ಈ ಪೈಕಿ 79% ಮಾರಾಟವು ಹೈದರಾಬಾದ್, ಮುಂಬೈ ಮತ್ತು ದಿಲ್ಲಿಯಲ್ಲಿ ನಡೆದಿದೆ.
ಚುನಾವಣಾ ಬಾಂಡ್ ಗಳ ಅತಿ ಹೆಚ್ಚಿನ ಮಾರಾಟವು ಹೈದರಾಬಾದ್ (359 ಕೋಟಿ ರೂಪಾಯಿ)ನಲ್ಲಿ ನಡೆದಿದೆ. ನಂತರದ ಸ್ಥಾನಗಳಲ್ಲಿ ಮುಂಬೈ (259.30 ಕೋಟಿ ರೂ.) ಮತ್ತು ದಿಲ್ಲಿ (182.75 ಕೋಟಿ ರೂ.) ಬರುತ್ತವೆ. ಚುನಾವಣಾ ಬಾಂಡ್ಗಳ ಅತಿ ಹೆಚ್ಚಿನ ನಗದೀಕರಣವು ದಿಲ್ಲಿಯಲ್ಲಿ ನಡೆದಿದೆ. ಅಲ್ಲಿ 882.80 ಕೋಟಿ ರೂ. ಮೊತ್ತದ ಬಾಂಡ್ಗಳನ್ನು ನಗದೀಕರಿಸಲಾಗಿದೆ. ಹೈದರಾಬಾದ್ ನಲ್ಲಿ 81.50 ಕೋಟಿ ರೂ. ಮೊತ್ತದ ಬಾಂಡ್ಗಳನ್ನು ನಗದೀಕರಿಸಲಾಗಿದೆ.
ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಮೂಲಕ ಹೆಚ್ಚಿನ ಹಣವು ಹೈದರಾಬಾದ್, ಮುಂಬೈ ಮತ್ತು ದಿಲ್ಲಿಯಿಂದ ಬಂದಿದೆ ಹಾಗೂ ಆ ಹಣವು ದಿಲ್ಲಿಗೆ ಹೋಗಿದೆ. ಅಂದರೆ, ಹೆಚ್ಚಿನ ಹಣವು ರಾಷ್ಟ್ರೀಯ ಪಕ್ಷಗಳಿಗೆ ಹೋಗಿದೆ.
ವ್ಯಕ್ತಿಗಳು ಮತ್ತು ಸಂಸ್ಥೆಗಳು ಚುನಾವಣಾ ಬಾಂಡ್ಗಳ ಮೂಲಕ ಅನಾಮಧೇಯವಾಗಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ. ರಾಜಕೀಯ ಪಕ್ಷಗಳು ತಮ್ಮ ಹಣದ ಮೂಲವನ್ನು ವಿವರಿಸಬೇಕಾಗಿಲ್ಲ.