ಮಧ್ಯಪ್ರದೇಶ | ಪ್ರಾಂಕ್ ರೀಲ್ ಮಾಡಲು ಹೋಗಿ ನೇಣು ಬಿಗಿದುಕೊಂಡು ಮೃತಪಟ್ಟ 11 ವರ್ಷದ ಬಾಲಕ!

Update: 2024-07-21 17:05 GMT

Credit: iStock Photo

ಮೊರೇನಾ (ಮಧ್ಯಪ್ರದೇಶ): ಸಾಮಾಜಿಕ ಮಾಧ್ಯಮದಲ್ಲಿ ರೀಲ್ ಅಪ್ಲೋಡ್ ಮಾಡಲೆಂದು ಕುತ್ತಿಗೆ ಸುತ್ತ ನೇಣು ಬಿಗಿದುಕೊಳ್ಳುವ ಪ್ರಾಂಕ್ ವಿಡಿಯೊವೊಂದನ್ನು ಮಾಡುತ್ತಿದ್ದ 11 ವರ್ಷದ ಬಾಲಕನೊಬ್ಬ, ಕೊನೆಗೆ ಅದೇ ಉರುಳಿಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಜೆ ಅಂಬಾ ಪಟ್ಟಣದಲ್ಲಿ ನಡೆದಿದೆಯೆನ್ನಲಾದ ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರವಿ ಭಡೋರಿಯ ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಬಾಲಕನೊಬ್ಬ ಚಿತ್ರೀಕರಿಸಿರುವ ವಿಡಿಯೊ ಪ್ರಕಾರ, ಕರಣ್ ಎಂಬ ಬಾಲಕನು ಮರದಿಂದ ನೇತಾಡುತ್ತಿದ್ದ ಹಗ್ಗವನ್ನು ತನ್ನ ಕುತ್ತಿಗೆಯ ಸುತ್ತ ಸುತ್ತಿಕೊಂಡಿದ್ದಾನೆ. ನಂತರ, ಆತ ಅದರಿಂದ ನೋವಿಗೊಳಗಾಗುತ್ತಿರುವಂತೆ ನಟಿಸಿದ್ದಾನೆ. ಈ ಸಂದರ್ಭದಲ್ಲಿ ಆತನ ಸುತ್ತಲಿನ ಹುಡುಗರು ಆಟ ಆಡುವುದನ್ನು ಮುಂದುವರಿಸಿರುವುದು ಕಂಡು ಬಂದಿದೆ.

ಪೊಲೀಸರ ಪ್ರಕಾರ, ಕರಣ್ ನಟನೆ ಮಾಡುತ್ತಿದ್ದಾನೆ ಎಂದು ಜೊತೆಯಲ್ಲಿನ ಹುಡುಗರು ಭಾವಿಸಿದ್ದಾರೆ. ಆದರೆ, ಆತ ಕೆಲವೇ ಕ್ಷಣಗಳಲ್ಲಿ ಪ್ರಜ್ಞಾಹೀನನಾಗಿದ್ದಾನೆ ಎಂದು ಹೇಳಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕರಣ್ ಪೋಷಕರು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರವಿ ಭಡೋರಿಯ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News