ಮಣಿಪುರ ಹಿಂಸಾಚಾರದಲ್ಲಿ ಇಲ್ಲಿಯ ತನಕ 175 ಮಂದಿ ಬಲಿ, 1,000ಕ್ಕೂ ಅಧಿಕ ಮಂದಿಗೆ ಗಾಯ
ಇಂಫಾಲ್: ಮೇ ತಿಂಗಳಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಇಲ್ಲಿಯ ತನಕ ಸುಮಾರು 175 ಜನರು ಬಲಿಯಾಗಿದ್ದಾರೆ ಹಾಗೂ 1,108ರಷ್ಟು ಮಂದಿ ಗಾಯಗೊಂಡಿದ್ದಾರೆ. ಸುಮಾರು 32 ಮಂದಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಒಟ್ಟು 4,786 ಮನೆಗಳಿಗೆ ಬೆಂಕಿಹಚ್ಚಲಾಗಿದ್ದರೆ 386 ಧಾರ್ಮಿಕ ಸ್ಥಳಗಳಿಗೆ ಹಾನಿಯೆಸಗಲಾಗಿದೆ.
“ರಾಜ್ಯದಲ್ಲಿ ಸಹಜತೆ ವಾಪಸಾಗುವಂತಾಗಲು ಮಣಿಪುರ ಪೊಲೀಸರು, ಕೇಂದ್ರೀಯ ಪಡೆಗಳು ಮತ್ತು ಅಲ್ಲಿನ ಆಡಳಿತ ಹಗಲಿರುಳು ಶ್ರಮಿಸುತ್ತಿದೆ,” ಎಂದು ಐಜಿಪಿ (ಕಾರ್ಯಾಚರಣೆ) ಐ ಕೆ ಮುಯಿವ ಹೇಳಿದ್ದಾರೆ.
ಕಳೆದುಹೋದ ಶಸ್ತ್ರಾಸ್ತ್ರಗಳ ಪೈಕಿ 1,359 ಬಂದೂಕುಗಳು ಹಾಗೂ 15,050 ಶಸ್ತ್ರಾಸ್ತ್ರ ವಾಪಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಗಲಭೆಕೋರರು ಹಿಂಸಾಚಾರದ ವೇಳೆ ಬೃಹತ್ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ಲೂಟಿಗೈದಿದ್ದರು.
ರಾಜ್ಯದಲ್ಲಿ 5,172 ಹಿಂಸೆಯ ಪ್ರಕರಣಗಳು ನಡೆದಿವೆ ಹಾಗೂ ಹಾನಿಗೊಂಡ ಧಾರ್ಮಿಕ ಸ್ಥಳಗಳಲ್ಲಿ 254 ಚರ್ಚುಗಳು ಮತ್ತು 132 ದೇವಸ್ಥಾನಗಳು ಸೇರಿವೆ ಎಂದು ಐಜಿಪಿ ಹೇಳಿದರು.
ಬಿಷ್ಣಪುರ್ ಜಿಲ್ಲೆಯ ಫೌಗಕ್ಚಾವೊ ಇಖೈನಿಂದ ಚುರಚಂದಪುರ ಜಿಲ್ಲೆಯ ಕಂಗ್ವೈ ತನಕದ ಭದ್ರತಾ ಬ್ಯಾರಿಕೇಡುಗಳನ್ನು ತೆಗೆದುಹಾಕಲಾಗಿದೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಗಲಭೆಗಳಲ್ಲಿ ಮೃತಪಟ್ಟ 175 ಜನರಲ್ಲಿ ಒಂಬತ್ತು ಜನರ ಗುರುತು ಪತ್ತೆಯಾಗಿಲ್ಲ, 79 ಮೃತದೇಹಗಳನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದರೆ 96 ಮೃತದೇಹಗಳ ವಾರೀಸುದಾರರು ಬಂದಿಲ್ಲ.
ಗಲಭೆಗಳಿಗೆ ಸಂಬಂಧಿಸಿದಂತೆ 9,332 ಪ್ರಕರಣಗಳನ್ನು ದಾಖಲಿಸಲಾಗಿದ್ದು 325 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.