ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಇಬ್ಬರು ಪೊಲೀಸರ ಹತ್ಯೆ

Update: 2024-01-18 02:12 GMT

Photo: timesofindia.indiatimes.com

ಇಂಫಾಲ: ಹಲವು ತಿಂಗಳ ಕಾಲ ಹಿಂಸಾಚಾರದಿಂದ ಕಂಗೆಟ್ಟಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮಣಿಪುರದ ಮೊರೆಹ್ ಪಟ್ಟಣದ ವಿವಿಧೆಡೆ ಭದ್ರತಾ ಪಡೆಗಳ ಹಲವು ಕೇಂದ್ರಗಳ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಇಬ್ಬರು ಪೊಲೀಸ್ ಕಮಾಂಡೊಗಳು ಮೃತಪಟ್ಟಿದ್ದು, ಇತರ ಮೂರು ಮಂದಿ ಗಾಯಗೊಂಡಿದ್ದಾರೆ.

ಈ ಸಂಘಠಿತ ದಾಳಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ಮತ್ತು ನಿರಂತರ ಗುಂಡಿನ ದಾಳಿ ಸೇರಿದ್ದು, ತೆಂಗೋಪಾಲ್ ಜಿಲ್ಲೆಯ ಸಂಘರ್ಷಪೀಡಿತ ಪಟ್ಟಣದಲ್ಲಿ ಹಲವು ಮನೆಗಳು ಭಸ್ಮವಾಗಿವೆ. ಕಳೆದ ವರ್ಷದ ಕೊನೆಯಿಂದೀಚೆಗೆ ಈ ಪಟ್ಟಣ ಹಿಂಸೆಯ ಕೇಂದ್ರವಾಗಿ ಮಾರ್ಪಟ್ಟಿದೆ.

ಪಕ್ಕದ ಮ್ಯಾನ್ಮಾರ್ನಿಂದ ಗಡಿ ದಾಟಿ ಆಗಮಿಸಿದ ಎರಡು ಅಗ್ನಿಶಮನ ವಾಹನಗಳು ಮೊರೆಹ್ ಪಟ್ಟಣದ ಕನನ್ ವೆಂಗ್ ಪ್ರದೇಶದ 3ನೇ ವಾರ್ಡ್ನಲ್ಲಿ ಇತರ ಮನೆಗಳಿಗೆ ಬೆಂಕಿ ಹರಡುವುದುನ್ನು ತಡೆದವು ಹಾಗೂ ಮೊರೆಹ್ ಆಸ್ಪತ್ರೆ ಸಮೀಪ ಮನೆಗಳ ಸಂಕೀರ್ಣಕ್ಕೆ ಬೆಂಕಿ ಹರಡುವುದನ್ನು ನಿಯಂತ್ರಿಸಿದವು ಎಂದು ಮೂಲಗಳು ಹೇಳಿವೆ.

ಪೊಲೀಸರ ಹತ್ಯೆ ಸುದ್ದಿ ಹರಡುತ್ತಿದ್ದಂತೆ, ದೊಡ್ಡ ಸಂಖ್ಯೆಯ ಮಹಿಳೆಯರು ಬೀದಿಗಿಳಿದು ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಪದೇ ಪದೇ ಭದ್ರತಾ ಪಡೆಗಳ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದನ್ನು ತಡೆಯುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು. ಕೆಲ ಪ್ರತಿಭಟನಾಕಾರರು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ರಾಜ್ಯಪಾಲರಾದ ಅನುಸೂಯಾ ಉಕ್ಲಿ ಅವರ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದರೂ, ಅವರನ್ನು ಯಶಸ್ವಿಯಾಗಿ ತಡೆಯಲಾಯಿತು.

ಕಳೆದ ವರ್ಷ ಉಪವಿಭಾಗೀಯ ಪೊಲೀಸ್ ಅಧೀಕಾರಿ ಚಿಂಗ್ತಮ್ ಆನಂದ್ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಮೊರೆಹ್ ನಿವಾಸಿಗಳಾದ ಫಿಲಿಪ್ ಖೊಂಗ್ಸಿ ಮತ್ತು ಹೇಮ್ಖೋಲಾಲ್ ಮಾಟೆ ಅವರನ್ನು ಬಂಧಿಸಿದ ಬೆನ್ನಲ್ಲೇ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News