ಲೈವ್ ವೇಳೆ ಪ್ರಧಾನಿ ಮೋದಿಯವರ ಅಣಕು ಖಾತೆಯ ಹೇಳಿಕೆಯನ್ನು ಓದಿದ ಇಂಡಿಯಾ ಟುಡೇ ಆ್ಯಂಕರ್ ಗೌರವ್ ಸಾವಂತ್ ; ವೀಡಿಯೊ ವೈರಲ್

Update: 2024-11-07 13:18 GMT

ಅಣಕು ಖಾತೆಯಿಂದ ಟ್ವೀಟ್ | X

ಹೊಸದಿಲ್ಲಿ : ಅನಾಯಾಸವಾಗಿ ಸುಳ್ಳು ಹೇಳುವವರ ಹೆಸರಲ್ಲಿಯೆ ಮತ್ಯಾರೋ ಸುಳ್ಳು ಹೇಳಿದರೆ ಹೇಗಿರುತ್ತದೆ? ಆ ರೀತಿಯ ಒಂದು ಘಟನೆ ಪ್ರಮುಖ ಟಿವಿ ವಾಹಿನಿಯಲ್ಲಿ ಲೈವ್ ವೇಳೆಯಲ್ಲಿಯೇ ಆಗಿಹೋಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆಲುವು ದಾಖಲಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಮಿತ್ರನಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ವರದಿ ಮಾಡುವ ಉತ್ಸಾಹದಲ್ಲಿ ಟಿವಿ ಸುದ್ದಿ ನಿರೂಪಕರೊಬ್ಬರು ಪ್ರಧಾನ ಮಂತ್ರಿಯ ಹೆಸರಿನ ಅಣಕು ಎಕ್ಸ್ ಖಾತೆಯ ಟ್ವೀಟ್ ಅನ್ನು ಟಿವಿಯಲ್ಲಿ ಲೈವ್ ಆಗಿಯೇ ಓದಿ ಯಡವಟ್ಟು ಮಾಡಿಕೊಂಡಿದ್ದಾರೆ.

ಇಂಡಿಯಾ ಟುಡೆ ವಾಹಿನಿಯ ಹಿರಿಯ ಪತ್ರಕರ್ತ ಹಾಗು ಆ್ಯಂಕರ್ ಗೌರವ್ ಸಾವಂತ್ ಮಾಡಿಕೊಂಡ ಈ ಯಡವಟ್ಟಿನ ವೀಡಿಯೊ ಈಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ನಿರೂಪಕನ ತಪ್ಪುಗಳ ಬಗ್ಗೆ ಮಾತಾಡುತ್ತಿರವವರು ಹಲವರಾದರೆ, ಅದು ಸಾಮಾನ್ಯವಾಗಿ ಸಂಭವಿಸುವ ಪ್ರಮಾದ ಎಂದೂ ಹಲವರು ವಾದಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಕೆನಡಾದಲ್ಲಿನ ಖಾಲಿಸ್ತಾನಿ ಭಯೋತ್ಪಾದಕತೆ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಟ್ರಂಪ್ ಜೊತೆ ಚರ್ಚಿಸುವುದಾಗಿ ಮೋದಿ ಹೇಳಿರುವ ರೀತಿಯಲ್ಲಿ ಮೋದಿ ಹೆಸರಿನ ಆ ಅಣಕು ಖಾತೆಯಲ್ಲಿನ ಟ್ವೀಟ್ ಅನ್ನು ಇಂಡಿಯಾ ಟುಡೇಯ ಗೌರವ್ ಸಾವಂತ್ ಲೈವ್ ಆಗಿಯೆ ಓದಿಬಿಟ್ಟಿದ್ದಾರೆ. ಸಾಲದ್ದಕ್ಕೆ ಇದು ಭಾರೀ ಸ್ಟ್ರಾಂಗ್ ಹೇಳಿಕೆ ಎಂದೂ ಹೇಳಿದ್ದಾರೆ!

ಮೋದಿಯವರ ಹೆಸರಿನಲ್ಲಿದ್ದ ಆ ಅಣಕು ಹೇಳಿಕೆಯನ್ನು ಓದುವಾಗ ನಿರೂಪಕ ಮೋದಿಯವರ ಹೇಳಿಕೆ ಎಂದು ಒತ್ತಿ ಒತ್ತಿ ಹೇಳಿದರು. ಆದರೆ ಮೋದಿಯವರ ಎಕ್ಸ್ ಖಾತೆಯಲ್ಲಿನದೇ ಪ್ರೊಫೈಲ್ ಚಿತ್ರವನ್ನು ಹೊಂದಿರುವ ಅಣಕು ಖಾತೆ ಎಂದಿದ್ದುದನ್ನು ಗೌರವ್ ಗಮನಿಸಿಯೇ ಇರಲಿಲ್ಲ.

ಆದರೆ, ಮರುಕ್ಷಣವೇ ಎಲ್ಲವೂ ಅವರಿಗೆ ಮನವರಿಕೆಯಾಗಿಬಿಟ್ಟಿತ್ತು. ತಕ್ಷಣವೇ ತಮ್ಮ ತಪ್ಪನ್ನು ಸರಿಪಡಿಸಿದರು. ನನ್ನಿಂದ ತಪ್ಪಾಗಿದೆ, ಕ್ಷಮಿಸಿ ಎಂದು ಹೇಳಿ, ಮೋದಿಯವರ ಅಧಿಕೃತ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸುವ ಮೂಲ ಸಂದೇಶವನ್ನು ಓದಲು ಮುಂದಾದರು.

ವರದಿಯನ್ನು ಬೇಗ ಕೊಡಬೇಕು, ಎಲ್ಲರಿಗಿಂತ ಬೇಗ ಹೊಸ ವಿಚಾರವೇನಾದರೂ ಇದ್ದರೆ ಅದನ್ನು ವೀಕ್ಷಕರ ಮುಂದಿಡಬೇಕು ಎನ್ನುವ ಉತ್ಸಾಹದಿಂದ, ಧಾವಂತದಿಂದ ಇದು ಸಾಮಾನ್ಯವಾಗಿ ನೇರ ಪ್ರಸಾರದ ವೇಳೆ ಸಂಭವಿಸುವ ಪ್ರಮಾದ. ಆದರೆ ಆ ಕ್ಷಣಕ್ಕೆ ಅದು ನಗೆಪಾಟಲಿಗೆ ಈಡಾಗುವ ವಿಷಯವೂ ಆಗಿಬಿಡುತ್ತದೆ.

ಅಂತರ್ಜಾಲ ಬಳಕೆದಾರರ ಗಮನಕ್ಕೆ ಬಂದುಬಿಟ್ಟರೆ ಜಾತಕ ಜಾಲಾಡಿಬಿಡುವುದು ನಿಶ್ಚಿತ. ಇಲ್ಲಿಯೂ ಹಾಗೆಯೇ ಆಗಿದೆ. ಆ ಅಣಕು ಖಾತೆ ನೈಜ ಖಾತೆಯೆಂದೇ ನಂಬಿಸುವಷ್ಟು ಹೋಲಿಕೆಯುಳ್ಳದ್ದಾಗಿದೆ ಎಂಬುದನ್ನು ಹಲವರು ಒಪ್ಪಿದರೂ, ಪ್ರಸಾರವನ್ನು ವೀಕ್ಷಿಸುವ ಲಕ್ಷಗಟ್ಟಲೆ ವೀಕ್ಷಕರಿಗೆ ಹೇಳುವ ಮೊದಲು ಪತ್ರಕರ್ತರು ಸರಿಯಾಗಿ ಪರಿಶೀಲಿಸುವ ಅಗತ್ಯವನ್ನು ಕೂಡ ಅನೇಕರು ಒತ್ತಿ ಹೇಳಿದ್ದಾರೆ.

103 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ಪ್ರಧಾನಿ ಮೋದಿಯವರ ಅಧಿಕೃತ ಖಾತೆಯಿಂದ ಅವರು ಮೂಲ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಈ ನಡುವೆ, ಶಿವಸೇನಾ ಯುಬಿಟಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸುದ್ದಿ ವಾಹಿನಿಯನ್ನು ಟೀಕಿಸಲು ಈ ಘಟನೆಯನ್ನು ಪ್ರಸ್ತಾಪಿಸಿದ್ದಾರೆ.

ಅಮೆರಿಕದ ಟಿವಿ ಚಾನೆಲ್‌ಗಳು ಯಾವ ರಾಜಕೀಯ ಪಕ್ಷ ಫಲಿತಾಂಶಗಳಲ್ಲಿ ಮುಂದಿದೆ ಎಂದು ತೋರಿಸಿರುವ ಪಕ್ಷಪಾತದ ಬಗ್ಗೆ ಟ್ವೀಟ್ ಮಾಡಿದ್ದ ಪತ್ರಕರ್ತರಿದ್ದ ವಾಹಿನಿ ಕಡೆಗೆ ತಾನು ಕೂಡ ಅಂಥದೇ ತಪ್ಪು ಮಾಡಿರುವುದರ ಬಗ್ಗೆ ಅವರು ಹೇಳಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಅಮೆರಿಕಾದ ಸುದ್ದಿ ವಾಹಿನಿಗಳಿಗೆ ಪಕ್ಷಪಾತ, ಅಣಕು ನಿರೂಪಣೆ ಮತ್ತು ಚುನಾವಣಾ ಪ್ರಸಾರದ ಬಗ್ಗೆ ಪಾಠಗಳನ್ನು ಮಾಡುವ ಟ್ವೀಟ್‌ಗಳ ಬಗ್ಗೆ ಚರ್ಚಿಸಿದ್ದ ವಾಹಿನಿಯೇ ಕಡೆಗೆ ತಾನೂ ಅಣಕು ಖಾತೆಯಲ್ಲಿನ ವಿಚಾರ ಎತ್ತಿಕೊಂಡು ಹೆಡ್ ಲೈನ್ ಮಾಡಿದ ಪ್ರಮಾದದ ಬಗ್ಗೆ ಗಮನ ಸೆಳೆದಿದ್ದಾರೆ.

ಇದೇನೇ ಇದ್ದರೂ, ಅಂತರ್ಜಾಲದಲ್ಲಿ ಮೋದಿಯವರ ಅಣಕು ಖಾತೆಯ ಟ್ವೀಟ್ ಗೆ ತಕ್ಕಂತೆ ಟ್ರಂಪ್ ಅವರದೂ ಒಂದು ಅಣಕು ಖಾತೆಯ ಮೂಲಕ ತಾವು ಮಾಡಲಿರುವ ಚರ್ಚೆಯ ಬಗ್ಗೆ ಟ್ರಂಪ್ ಹೇಳಿರುವಂತೆ ತೋರಿಸಲಾಗಿದೆ.

“ಬಹುಷಃ ಅವರ ಮೆದುಳನ್ನು ಮತ್ತೆ ಫ್ರೀಝರ್‌ ನಲ್ಲಿ ಇಟ್ಟಿರಬಹುದು” ಎಂದು ಇಂದ್ರನಿಲ್ ಸಂತ್ರ ಎಂಬವರು ಪ್ರತಿಕ್ರಿಯಿಸಿದ್ದಾರೆ.

“ಸುದ್ದಿಯ ಓಟದಲ್ಲಿ ಮುಂದೆಯಿರಲು ಮಾಡುವ ಪ್ರಯತ್ನದ ನಡುವಿನ ತೀವ್ರ ಒತ್ತಡವನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಜತಿನ್ ಸಂಗಾನಿ ಎನ್ನುವವರು ಕಮೆಂಟ್ ಮಾಡಿದ್ದಾರೆ.

“ವೇಗವಾಗಿ ಸುದ್ದಿ ಹಂಚುವ ಪ್ರಯತ್ನದಲ್ಲಿ ಉಲ್ಟಾ ಪಲ್ಟಾ ಆಯಿತು ಎಂದು ವನಮಾಲ” ಎಂಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News