FACT CHECK | ಟ್ರಂಪ್ ಭಾಷಣದ ವೇಳೆ ಪ್ರೇಕ್ಷಕರು "ಮೋದಿ-ಮೋದಿ" ಎಂದು ಕೂಗಿದ್ದಾರೆಯೇ?
ಹೊಸದಿಲ್ಲಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಪ್ರೇಕ್ಷಕರು "ಮೋದಿ-ಮೋದಿ" ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.
ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಜಯ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಅಲ್ಲಿ ಪ್ರೇಕ್ಷಕರು ಘೋಷಣೆಗಳನ್ನು ಕೂಗುವುದನ್ನು ಕೇಳಬಹುದು. ಟ್ರಂಪ್ ಅವರ ಭಾಷಣದ ಸಮಯದಲ್ಲಿ ಜನಸಮೂಹವು "ಮೋದಿ-ಮೋದಿ" ಎಂದು ಕೂಗುತ್ತಿದೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದರು.
ಈ ಕ್ಲಿಪ್ ನ್ನು ಬಿಜೆಪಿ ಶಾಸಕ ಅಶೋಕ್ ಸೈನಿ, ಬಿಜೆಪಿ ಮಧ್ಯಪ್ರದೇಶದ ರಾಜ್ಯ ಉಪಾಧ್ಯಕ್ಷ ಜಿತು ಜಿರಾತಿ ಮತ್ತು ಬಿಜೆಪಿ ನಾಯಕ ಗೋಪಾಲ್ ಶರ್ಮಾ ಕೂಡ ಹಂಚಿಕೊಂಡಿದ್ದರು.
Kreately Media ಎಂಬ ಹೆಸರಿನ ಎಕ್ಸ್ ಬಳಕೆದಾರರು ವೈರಲ್ ವೀಡಿಯೊವನ್ನು ಹಂಚಿಕೊಂಡು "ಟ್ರಂಪ್ ಕೆ ದೇಶ್ ಮೆ ಮೋದಿ ಕಾ ಜಲ್ವಾ ಅಂದ್ರೆ ʼಟ್ರಂಪ್ ದೇಶದಲ್ಲಿ ಮೋದಿಯ ಪ್ರಭಾವ" ಎಂದು ಬರೆದಿದ್ದರು.
ವಾಸ್ತವವೇನು?
ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಪ್ರೇಕ್ಷಕರು "ಮೋದಿ-ಮೋದಿ" ಎಂದು ಘೋಷಣೆ ಕೂಗಿದ್ದಾರೆ ಎನ್ನುವುದು ಸುಳ್ಳು ಎಂದು ಕೆಲ ಮಾಧ್ಯಮ ಸಂಸ್ಥೆಗಳು ನಡೆಸಿದ ಪರಿಶೀಲನೆಯಲ್ಲಿ ಬಯಲಾಗಿದೆ.
ಈ ವಿಡಿಯೋವನ್ನು Google ಲೆನ್ಸ್ ಬಳಸಿ ವೀಡಿಯೊದಿಂದ ಕೀ ಫ್ರೇಮ್ಗಳನ್ನು ಹುಡುಕಿದಾಗ ಪೂರ್ಣ ವೀಡಿಯೊ ಸಿಗುತ್ತದೆ. ವಿಡಿಯೋದಲ್ಲಿ ರಾಬರ್ಟ್ ಕೆನಡಿ ಜೂನಿಯರ್ ಅವರನ್ನು ಉಲ್ಲೇಖಿಸಿ, ಡೊನಾಲ್ಡ್ ಟ್ರಂಪ್, "ಅವರು ಅಮೆರಿಕವನ್ನು ಮತ್ತೆ ಆರೋಗ್ಯವಂತರನ್ನಾಗಿ ಮಾಡುತ್ತಾರೆ.." ಎಂದು ಹೇಳುತ್ತಾರೆ. ಆಗ ಅಲ್ಲಿ ನೆರೆದಿದ್ದ ಪ್ರೇಕ್ಷಕರು 'ಬಾಬಿ- ಬಾಬಿ' ಎಂಬ ಘೋಷಣೆ ಕೂಗುತ್ತಾರೆ. ಇದನ್ನೇ ತಪ್ಪಾಗಿ ಮೋದಿ ಮೋದಿ ಎಂದು ಹಂಚಿಕೊಳ್ಳಲಾಗಿದೆ.
ಇದಾದ ನಂತರ ಟ್ರಂಪ್, "ಬಾಬಿ ಮಹಾನ್ ವ್ಯಕ್ತಿ ಮತ್ತು ನಿಜವಾಗಿಯೂ ಕೆಲವು ಕೆಲಸಗಳನ್ನು ಮಾಡಲು ಬಯಸುತ್ತಾರೆ ಮತ್ತು ನಾವು ಅದನ್ನು ಮಾಡಲು ಬಿಡುತ್ತೇವೆ" ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ರಾಬರ್ಟ್ ಕೆನಡಿ ಜೂನಿಯರ್ ಅವರನ್ನು ಡೊನಾಲ್ಡ್ ಟ್ರಂಪ್ 'ಬಾಬಿ' ಎಂದು ಸಂಬೋಧಿಸಿದ್ದಾರೆ.
ರಾಬರ್ಟ್ ಕೆನಡಿ ಮೊದಲು ಚುನಾವಣೆ ರೇಸ್ ನಲ್ಲಿದ್ದು ನಂತರ ಹಿಂದೆ ಸರಿದಿದ್ದರು. ಟ್ರಂಪ್ ರಾಬರ್ಟ್ ಕೆನಡಿ ಜೂನಿಯರ್ ಅವರನ್ನು 'ಬಾಬಿ' ಎಂದು ಹಲವು ಬಾರಿ ಆ ವಿಡಿಯೋದಲ್ಲಿ ಸಂಬೋಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ನೊಂದಿಗೆ ಹಂಚಲಾಗುತ್ತಿರುವ ಹೇಳಿಕೆ ಸುಳ್ಳು ಎಂದು ಮಾಧ್ಯಮ ಸಂಸ್ಥೆಗಳು ನಡೆಸಿದ ಪರಿಶೀಲನೆಯಿಂದ ಬಯಲಾಗಿದೆ.