ಮಣಿಪುರ: ಪೊಲೀಸ್ ಅಮಾನತು ವಿರೋಧಿಸಿ ಪ್ರತಿಭಟನೆ ವೇಳೆ ಹಿಂಸಾಚಾರ; ಇಬ್ಬರು ಮೃತ್ಯು, 25ಕ್ಕೂ ಅಧಿಕ ಮಂದಿಗೆ ಗಾಯ
ಇಂಫಾಲ: ಸಶಸ್ತ್ರ ಬಂಡುಕೋರರ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಹಿನ್ನೆಲೆಯಲ್ಲಿ ಪೊಲೀಸ್ ಹೆಡ್‍ಕಾನ್‍ಸ್ಟೇಬಲ್ ಒಬ್ಬರನ್ನು ಸೇವೆಯಿಂದ ಅಮಾನತು ಮಾಡಿದ ಕ್ರಮದ ವಿರುದ್ಧ ಮಿಂಚಿನ ಪ್ರತಿಭಟನೆ ನಡೆದಿದ್ದು, ಈ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹೆಡ್‍ಕಾನ್‍ಸ್ಟೇಬಲ್ ಅಮಾನತು ಖಂಡಿಸಿ ಮಣಿಪುರದ ಕುಕಿ-ಝೋ ಆದಿವಾಸಿಗಳ ಪ್ರಾಬಲ್ಯದ ಚುರಚಂದಾಪುರ ಜಿಲ್ಲೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಪೊಲೀಸ್ ಸೆಲ್ಫಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ಇದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಎಸ್ಪಿ ಸುತ್ತ ಗುಂಪು ಸೇರಿರುವ ಪ್ರತಿಭಟನಾಕಾರರು, ಅಮಾನತುಗೊಂಡ ಎಚ್‍ಸಿ ಸಿಯಾಮ್‍ಲಾಲ್‍ಪಾಲ್ ಅವರನ್ನು ತಕ್ಷಣ ಮರು ನಿಯೋಜನೆ ಮಾಡುವಂತೆ ಒತ್ತಾಯಿಸುತ್ತಿರುವ ದೃಶ್ಯ ಕಂಡುಬಂತು. ಸಿಯಾಮ್‍ಲಾಲ್‍ಪಾಲ್, ಸಶಸ್ತ್ರ ಬಂಡುಕೋರರು ಹಾಗೂ ಗ್ರಾಮ ರಕ್ಷಣಾ ಕಾರ್ಯಕರ್ತರ ಜತೆ ಬೆಟ್ಟದ ತುದಿಯ ಬಂಕರ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಹೊರಗೆ ಬಸ್ ಹಾಗೂ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಬೇಕಾಯಿತು. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂಟರ್‍ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ.
ಸಶಸ್ತ್ರ ಬಂಡುಕೋರರ ಜತೆ ಫೆಬ್ರುವರಿ 14ರಂದು ಚಿತ್ರೀಕರಿಸಿಕೊಂಡ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಚುರಚಂದಾಪುರ ಜಿಲ್ಲಾ ಪೊಲೀಸ್ ಇಲಾಖೆಯ ಸಿಯಮ್‍ಲಾಲ್‍ಪಾಲ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಈಗಾಗಲೇ ಅವರ ವಿರುದ್ಧ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಶಿವಾನಂದ ಸುರ್ವೆ ಹೇಳಿದ್ದಾರೆ.