ಅ.31ರವರೆಗೆ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು: ಕರ್ನಾಟಕಕ್ಕೆ ಸಿಡಬ್ಲ್ಯುಆರ್ಸಿ ಸೂಚನೆ
ಹೊಸದಿಲ್ಲಿ: ತಮಿಳುನಾಡಿಗೆ ಅ.16ರಿಂದ 31ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಕರ್ನಾಟಕಕ್ಕೆ ಬುಧವಾರ ಸೂಚಿಸಿದೆ.
ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ.
ಕರ್ನಾಟಕವು ತನ್ನ ಜಲಾಶಯಗಳಿಂದ ತಮಿಳುನಾಡಿನ ಬಿಳಿಗುಂಡ್ಲು ಜಲಾಶಯಕ್ಕೆ ಬಿಡುಗಡೆಗೊಳಿಸುವ ನೀರಿನ ಪ್ರಮಾಣವು ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಗಳಷ್ಟು ಇರುವಂತೆ ನೋಡಿಕೊಳ್ಳಬೇಕು ಎಂದು ಕಾವೇರಿ ಜಲನಿಯಂತ್ರಣ ಪ್ರಾಧಿಕಾರವು ಇಂದು ನಡೆದ ಸಭೆಯ ಬಳಿಕ ತೀರ್ಮಾನಕ್ಕೆ ಬಂದಿದೆ. 2023ರ ಆಕ್ಟೋಬರ್ 16ರಂದು ಬೆಳಗ್ಗೆ 8:00 ಗಂಟೆಯಿಂದ ಈ ನಿರ್ದೇಶನ ಅನ್ವಯವಾಗಲಿದ್ದು, ಅದನ್ನು 2023ರ ಆಕ್ಟೋಬರ್ 31ರವರೆಗೂ ಕಾಯ್ದುಕೊಳ್ಳಬೇಕು ಎಂದು ಕಾವೇರಿ ಜಲನಿಯಂತ್ರಣ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಮುಂದಿನ 15 ದಿನಗಳವರೆಗೆ ಕರ್ನಾಟಕವು 16 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೊಳಿಸಬೇಕೆಂದು ತಮಿಳುನಾಡು ಆಗ್ರಹಿಸಿತ್ತು.
ತೀವ್ರ ನೀರಿನ ಕೊರತೆಯನ್ನು ತಾನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಳಿಗುಂಡ್ಲು ಜಲಾಶಯಕ್ಕೆ ನೀರು ಬಿಡುಗಡೆಗೊಳಿಸುವುದು ಅಸಾಧ್ಯವಾಗಿದೆಯೆಂದು ಕರ್ನಾಟಕವು ಸಿಡಬ್ಲ್ಯುಆರ್ಸಿ ಮುಂದೆ ವಾದ ಮಂಡಿಸಿತ್ತು. 2023ರ ಆಕ್ಟೋಬರ್ 10ರವರೆಗೆ ತನ್ನ ಜಲಾಶಯಗಳಿಗೆ ಹರಿದು ಬಂದಿರು ನೀರಿನ ಪ್ರಮಾಣದಲ್ಲಿ ಶೇ.50.891ರಷ್ಟು ಗಣನೀಯ ಕೊರತೆಯುಂಟಾಗಿರುವುದಾಗಿ ಅದು ಹೇಳಿದೆ.
ತಮಿಳುನಾಡಿಗೆ ನೀರು ಬಿಡುವ ಕುರಿತಾದ ಸುಪ್ರೀಂಕೋರ್ಟ್ ಹಾಗೂ ಕಾವೇರಿ ಜಲನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ದ ಆದೇಶದ ವಿರುದ್ಧ ಕರ್ನಾಟಕ ಸರಕಾರವು ಪುನರ್ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು.ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರಪರಿಸ್ಥಿತಿಯಿರುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಅಸಾಧ್ಯವೆಂದು ಕರ್ನಾಟಕ ಸರಕಾರವು ವಾದಿಸಿತ್ತು. ಕೃಷ್ಣರಾಜ ಸಾಗರ ಸೇರಿದಂತೆ ಕರ್ನಾಟಕ ಕಾವೇರಿ ತಪ್ಪಲು ಪ್ರದೇಶದಲ್ಲಿರುವ ಜಲಾಶಗಳಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಕುಸಿಯುತ್ತಾ ಹೋಗುತ್ತಿದೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದರು.