ಉತ್ತರಪ್ರದೇಶ: ಮಣ್ಣಿನ ದಿಬ್ಬ ಕುಸಿದು ನಾಲ್ವರು ಮಹಿಳೆಯರು ಮೃತ್ಯು

Update: 2024-11-12 07:49 GMT

Screengrab:X/@ANI

ಲಕ್ನೋ: ಉತ್ತರ ಪ್ರದೇಶದ ಕಾಸ್ಗಂಜ್ನಲ್ಲಿ ಮಂಗಳವಾರ ಭಾರೀ ಪ್ರಮಾಣದ ಮಣ್ಣಿನ ದಿಬ್ಬ ಕುಸಿದು ಅವಶೇಷಗಳಡಿಯಲ್ಲಿ ಸಿಲುಕಿ ಕನಿಷ್ಠ ನಾಲ್ವರು ಮಹಿಳೆಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಮಹಿಳೆಯರು ಮನೆಯ ಗೋಡೆ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುತ್ತಿದ್ದಾಗ ಅನಿರೀಕ್ಷಿತವಾಗಿ ಮಣ್ಣಿನ ರಾಶಿಯು ಕುಸಿದು ಬಿದ್ದಿದ್ದು, ಅನೇಕ ಮಹಿಳೆಯರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಸ್ಗಂಜ್ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಈ ಕುರಿತು ಮಾಹಿತಿ ನೀಡಿದ್ದು, ಮಣ್ಣಿನಡಿಯಿಂದ ಒಂಬತ್ತು ಮಹಿಳೆಯರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜೆಸಿಬಿ ಸಹಾಯದಿಂದ ಇಡೀ ಪ್ರದೇಶದಲ್ಲಿ ಪರಿಶೀಲನೆ ನಡೆಸಲಾಗಿದೆ. ಮಣ್ಣಿನಡಿಯಲ್ಲಿ ಹೆಚ್ಚಿನ ಜನರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ತೀರಾ ಕಡಿಮೆ. ಘಟನೆಯಲ್ಲಿ ಯಾರೇ ನಿರ್ಲಕ್ಷ್ಯ ವಹಿಸಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಘಟನೆ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News