ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಪೊಲೀಸರೊಂದಿಗೆ ಗುಂಡಿನ ಕಾಳಗದಲ್ಲಿ 4 ನಕ್ಸಲರು ಹತ

Update: 2024-03-19 06:00 GMT

ಸಾಂದರ್ಭಿಕ ಚಿತ್ರ | Photo: NDTV 

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಕೊಲಮರ್ಕ ಗುಡ್ಡ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ಮಂದಿ ನಕ್ಸಲರು ಹತರಾಗಿದ್ದಾರೆ.

ನಕ್ಸಲರ ತಂಡವೊಂದು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ತೆಲಂಗಾಣದಿಂದ ಗಡ್ಚಿರೋಲಿಗೆ ಪ್ರಣ್ಹಿತಾ ನದಿ ದಾಟಿ ಬಂದಿದೆ ಎಂಬ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆದಿದೆ.

ನಕ್ಸಲರ ಶೋಧಕ್ಕೆ ಭದ್ರತಾ ಪಡೆಗಳು ಮುಂದಾದಾಗ ಅವರ ಮೇಲೆ ಅನಿಯಂತ್ರಿತ ಗುಂಡಿನ ಮಳೆಗರೆದಾಗ ಭದ್ರತಾ ಪಡೆಗಳೂ ಪ್ರತಿ ದಾಳಿ ನಡೆಸಿದ್ದವು. ಆ ಕಡೆಯಿಂದ ಗುಂಡು ಹಾರಾಟ ನಿಂತಾಗ ಸ್ಥಳ ಪರಿಶೋಧಿಸಿದಾಗ ನಾಲ್ಕು ಪುರುಷ ನಕ್ಸಲರು ಸಾವಿಗೀಡಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರ ಶಸ್ತ್ರಾಸ್ತ್ರಗಳು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರಲ್ಲಿ ನಕ್ಸಲ್‌ ನಾಯಕ ಡಿವಿಸಿಎಂ ವರ್ಗೀಶ್‌ ಮತ್ತು ಡಿವಿಸಿಎಂ ಮಗ್ತು ಸೇರಿದ್ದಾರೆ. ಇತರ ಇಬ್ಬರನ್ನು ಕುರ್ಸಂಗ್‌ ರಾಜು ಮತ್ತು ಕುಡಿಮೆಟ್ಟ ವೆಂಕಟೇಶ್‌ ಅವರೆಂದು ಗುರುತಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರ ಈ ನಾಲ್ಕು ಮಂದಿಯನ್ನು ಪತ್ತೆಹಚ್ಚಿದವರಿಗೆ ಒಟ್ಟು ರೂ 36 ಲಕ್ಷ ನಗದು ಬಹುಮಾನವನ್ನು ಈ ಹಿಂದೆ ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News