ಗುಜರಾತ್ | ರಾಸಾಯನಿಕ ಘಟಕದಲ್ಲಿ ವಿಷಾನಿಲ ಸೇವಿಸಿ ನಾಲ್ವರು ಕಾರ್ಮಿಕರು ಮೃತ್ಯು
Update: 2024-12-29 09:39 GMT
ಭರೂಚ್ : ಗುಜರಾತ್ ನ ಭರೂಚ್ ಜಿಲ್ಲೆಯ ದಹೇಜ್ ನಲ್ಲಿರುವ ರಾಸಾಯನಿಕ ಘಟಕದಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಗುಜರಾತ್ ಫ್ಲೋರೋಕೆಮಿಕಲ್ಸ್ ಲಿಮಿಟೆಡ್(ಜಿಎಫ್ಎಲ್) ಉತ್ಪಾದನಾ ಘಟಕದಲ್ಲಿ ಪೈಪ್ ನಿಂದ ಸೋರಿಕೆಯಾದ ವಿಷಕಾರಿ ಹೊಗೆ ಉಸಿರಾಡಿ ನಾಲ್ವರು ಕಾರ್ಮಿಕರು ಪ್ರಜ್ಞಾಹೀನರಾಗಿದ್ದರು. ತಕ್ಷಣ ನಾಲ್ವರು ಕಾರ್ಮಿಕರನ್ನು ಭರೂಚ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರಲ್ಲಿ ಮೂವರು ರವಿವಾರ ಮುಂಜಾನೆ 3 ಗಂಟೆಗೆ ಮೃತಪಟ್ಟರೆ, ಇನ್ನೊಬ್ಬರು ಬೆಳಿಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ ಎಂದು ದಹೇಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಿಎಂ ಪಾಟಿದಾರ್ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.