ದೇಶದ ಸಂಪತ್ತಿನ ಶೇ. 40ರಷ್ಟು ಶೇ. 1ರಷ್ಟು ಜನರಲ್ಲಿದೆ ಎಂದು ಪ್ರಧಾನಿ ಎಂದಿಗೂ ಹೇಳುವುದಿಲ್ಲ : ಕಾಂಗ್ರೆಸ್

Update: 2024-04-23 15:32 GMT

ಜೈರಾಮ್ ರಮೇಶ್ | PC: PTI 

ಹೊಸದಿಲ್ಲಿ : ‘ಮಂಗಳ ಸೂತ್ರ’ ಹೇಳಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಕಳೆದ 10 ವರ್ಷಗಳಲ್ಲಿ ದೇಶದ ಸಂಪತ್ತಿನ ಶೇ. 40ರಷ್ಟು ಕೇವಲ ಶೇ. 1ರಷ್ಟು ಜನರ ಪಾಲಾಗಿದೆ ಎಂಬುದನ್ನು ಪ್ರಧಾನಿ ಅವರು ಎಂದಿಗೂ ಸಾರ್ವಜನಿಕರಿಗೆ ಹೇಳುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ‘ಎಕ್ಸ್’ನ ಪೋಸ್ಟ್‌ನಲ್ಲಿ, ‘‘2012ರಿಂದ 2021ರ ವರೆಗೆ ದೇಶದಲ್ಲಿ ಉತ್ಪತ್ತಿಯಾದ ಸಂಪತ್ತಿನ ಶೇ. 40ಕ್ಕಿಂತಲೂ ಅಧಿಕ ಕೇವಲ ಶೇ. 1ರಷ್ಟು ಜನರ ಪಾಲಾಗಿದೆ ಎಂಬುದನ್ನು ಅವರು ಎಂದಿಗೂ ನಿಮಗೆ ಹೇಳುವುದಿಲ್ಲ. ದೇಶದ ಒಟ್ಟು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಸರಿಸುಮಾರು ಶೇ. 64ರಷ್ಟು ಬಡವರು, ಕೆಳ ಮಧ್ಯಮ ವರ್ಗ ಹಾಗೂ ಮಧ್ಯಮ ವರ್ಗಗಳಿಂದ ಸಂಗ್ರಹವಾಗುತ್ತದೆ’’ ಎಂದು ಅವರು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ಮಾರಾಟ ಮಾಡಲಾದ ಹೆಚ್ಚಿನ ಸಾರ್ವಜನಿಕ ಸೊತ್ತುಗಳು ಹಾಗೂ ಸಂಪನ್ಮೂಲಗಳನ್ನು ಒಂದು ಅಥವಾ ಎರಡು ಕಂಪೆನಿಗಳ ಪಾಲಾಗಿವೆ. ಬೆಳೆಯುತ್ತಿರುವ ಆರ್ಥಿಕತೆಯ ಏಕಸ್ವಾಮ್ಯ ಹೆಚ್ಚಿನ ಹಣದುಬ್ಬರಕ್ಕೆ ಕಾರಣವಾಲಿದೆ ಎಂದು ಅರ್ಥಶಾಸ್ತ್ರಜ್ಞರು ತೋರಿಸಿಕೊಟ್ಟಿದ್ದಾರೆ. ಇಂದು 21 ಬಿಲಿಯನರ್‌ಗಳು ಒಟ್ಟಾಗಿ 70 ಕೋಟಿ ಭಾರತೀಯರಲ್ಲಿ ಇರುವ ಸಂಪತ್ತಿಗಿಂತ ಅಧಿಕ ಸಂಪತ್ತು ಹೊಂದಿದ್ದಾರೆ ಎಂದು ಅವರು ಹೇಳಿದರು.

‘‘ಭಾರತಕ್ಕೆ ತ್ವರಿತ ಆರ್ಥಿಕ ಬೆಳವಣಿಗೆಯ ಅಗತ್ಯತೆ ಇದೆ. ಭಾರತಕ್ಕೆ ಪಾರಿಸರಿಕ ಸುಸ್ಥಿರ ಆರ್ಥಿಕ ಬೆಳವಣಿಗೆಯ ಅಗತ್ಯತೆ ಇದೆ. ಇದನ್ನು ಭಾರತ ಮೈತ್ರಿಕೂಟ ಮಾತ್ರ ನೀಡಲು ಸಾಧ್ಯ’’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News