ಗಾರ್ಭಾ: ಗುಜರಾತ್ ನಲ್ಲಿ ಮುಂದುವರಿದ ಸಾವಿನ ಸರಣಿ
ಅಹ್ಮದಾಬಾದ್: ಗುಜರಾತ್ ನಲ್ಲಿ ಗಾರ್ಬಾ ನೃತ್ಯ ಕಾರ್ಯಕ್ರಮಗಳಲ್ಲಿ ಸಾವಿನ ಸರಣಿ ಮುಂದುವರಿದಿದ್ದು, ಸೂರತ್ ನಲ್ಲಿ ಇನ್ನೋರ್ವ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.
ಸೂರತ್ ನಗರದಲ್ಲಿ ರವಿವಾರ ರಾತ್ರಿ ನವರಾತ್ರಿ ಪೆಂಡಾಲ್ ಒಂದರಲ್ಲಿ ರೋಹಿತ್ ರಾಥೋಡ್ ಎಂಬವರು ಗಾರ್ಬಾ ನೃತ್ಯ ಮಾಡುತ್ತಿದ್ದಾಗ ಹಠಾತ್ತನೆ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು.
ಮೃತ ರೋಹಿತ್ ರಾಥೋಡ್ ಯುವ ಕೃಷಿಕನಾಗಿದ್ದು, ಅವರಿಗೆ ಹೃದ್ರೋಗದ ಕಾಯಿಲೆ ಇದ್ದಿರಲಿಲ್ಲವೆಂದು ಅವರ ಸಹೋದರ ಪ್ರವೀಣ್ ರಾಥೋಡ್ ತಿಳಿಸಿದ್ದಾರೆ.
ಗುಜರಾತ್ ನಲ್ಲಿ ಕಳೆದ ಕೆಲವು ದಿನಗಳಿಂದ ನವರಾತ್ರಿ ಹಬ್ಬದ ಆಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಗಾರ್ಭಾ ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ 11ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದು ಭಾರೀ ಕಳವಳ ಸೃಷ್ಟಿಸಿದೆ. ಮೃತಪಟ್ಟವರಲ್ಲಿ 13 ವರ್ಷದ ಬಾಲಕ ಸೇರಿದಂತೆ ಹದಿಹರೆಯದವರು ಹಾಗೂ ಮಧ್ಯವಯಸ್ಕರು ಕೂಡಾ ಸೇರಿದ್ದಾರೆ.
ಗಾರ್ಭಾ ನೃತ್ಯ ಕಾರ್ಯಕ್ರಮಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರವು ಕಟ್ಟೆಚ್ಚರದಲ್ಲಿರುವ ಗಾರ್ಭಾ ಪೆಂಡಾಲ್ ಗಳ ಸಮೀಪದಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ನಿರ್ದೇಶನಗಳನ್ನು ನೀಡಿದೆ. ವೈದ್ಯಕೀಯ ತುರ್ತುಪರಿಸ್ಥಿತಿ ಸಂದರ್ಭಗಳಲ್ಲಿ ಕಾರ್ಯಕ್ರಮದ ಸ್ಥಳವನ್ನು ಕ್ಷಿಪ್ರವಾಗಿ ಪ್ರವೇಶಿಸಲು ಕಾರಿಡಾರ್ ಗಳನ್ನು ಸೃಷ್ಟಿಸುವಂತೆಯೂ ರಾಜ್ಯ ಸರಕಾರವು ಗಾರ್ಬಾ ಸಂಘಟಕರಿಗೆ ಸೂಚನೆ ನೀಡಿದೆ.
ಈ ಮಧ್ಯೆ ಗಾರ್ಬಾ ನೃತ್ಯದಲ್ಲಿ ಪಾಲ್ಗೊಳ್ಳುವವರ ಸುರಕ್ಷತೆಗಾಗಿ ಕಾರ್ಯಕ್ರಮದ ಸ್ಥಳಗಳಲ್ಲಿ ವೈದ್ಯರುಗಳು ಹಾಗೂ ಆ್ಯಂಬುಲೆನ್ಸ್ ಗಳನ್ನು ನಿಯೋಜಿಸುವಂತೆಯೂ ಸಂಘಟಕರಿಗೆ ಸೂಚಿಸಲಾಗಿದೆ. ಹೃದಯಾಘಾತ ಸಂಭವಿಸಿದಾಗ ನಡೆಸುವ ಪ್ರಥಮ ಚಿಕಿತ್ಸೆಯಾದ ಸಿಪಿಆರ್ ಶುಶ್ರೂಷೆಯ ತರಬೇತಿಯನ್ನು ತಮ್ಮ ಸಿಬ್ಬಂದಿಗೆ ನೀಡುವಂತೆಯೂ ಸಲಹೆ ನೀಡಲಾಗಿದೆ ಹಾಗೂ ಗಾರ್ಬಾದಲ್ಲಿ ಭಾಗವಹಿಸುವವರಿಗೆ ನೀರಿನ ಸಮರ್ಪಕ ಲಭ್ಯತೆಯನ್ನು ಕೂಡಾ ಖಾತರಿಪಡಿಸುವಂತೆ ರಾಜ್ಯ ಸರಕಾರ ಸೂಚಿಸಿದೆ.