ವಿವಾಹ ಪೆಂಡಾಲ್‍ಗೆ ಬೆಂಕಿ: ಆರು ಮಂದಿ ಸಜೀವ ದಹನ
ಪಾಟ್ನಾ: ಬಿಹಾರದ ದರ್ಬಾಂಗ ಜಿಲ್ಲೆಯಲ್ಲಿ ವಿವಾಹ ಪೆಂಡಾಲ್‍ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಕನಿಷ್ಠ ಆರು ಮಂದಿ ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಈ ಘಟನೆ ರಾತ್ರಿ 11.45ರ ಸುಮಾರಿಗೆ ಬಹೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಲೀಂನಗರ ಎಂಬಲ್ಲಿ ಸಂಭವಿಸಿದೆ. ಸಿಡಿಮದ್ದುಗಳನ್ನು ಸಿಡಿಸುವ ವೇಳೆ ಪೆಂಡಾಲ್‍ಗೆ ಬೆಂಕಿ ಹತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೆಂಡಾಲ್‍ನ ಒಳಗೆ ಕೆಲವು ದಹಿಸುವ ವಸ್ತುಗಳನ್ನು ಇರಿಸಿದ್ದರಿಂದ ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಪೆಂಡಾಲ್‍ಗೆ ಹರಡಲು ಕಾರಣವಾಯಿತು ಎನ್ನಲಾಗಿದೆ.
ಘಟನೆಯಲ್ಲಿ ಸುನೀಲ್ ಪಾಸ್ವಾನ್ (26), ಲೀಲಾದೇವಿ (23), ಕಾಂಚನದೇವಿ (26), ಸಿದ್ಧಾಂತ ಕುಮಾರ್ (4), ಶಶಾಂಕ್ ಕುಮಾರ್ (3) ಮತ್ತು ಸಾಕ್ಷಿ ಕುಮಾರಿ (5) ಮೃತಪಟ್ಟಿದ್ದಾರೆ. ಮೂರು ಹಸುಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ.
"ಬೆಂಕಿಗೆ ನಿಖರವಾದ ಕಾರಣ ಏನು ಎಂದು ಪತ್ತೆ ಮಾಡಲು ತನಿಖೆಗೆ ಆದೇಶಿಸಿದ್ದೇನೆ. ಏತನ್ಮಧ್ಯೆ ವಿಕೋಪ ನಿರ್ವಹಣಾ ಮಾರ್ಗಸೂಚಿ ಅನ್ವಯ ಜಿಲ್ಲಾಡಳಿತ ಸಂತ್ರಸ್ತರ ಕುಟುಂಬಗಳಿಗೆ ಸಾಧ್ಯವಾದ ಎಲ್ಲ ನೆರವನ್ನು ನೀಡುತ್ತಿದೆ" ಎಂದು ಜಿಲ್ಲಾಧಿಕಾರಿ ರಾಜೀವ್ ರೋಶನ್ ಹೇಳಿದ್ದಾರೆ.