2011-2022ರ ನಡುವೆ ತಮ್ಮ ಪಾಸ್‌ಪೋರ್ಟ್‌ ಮರಳಿಸಿದ 70,000 ಭಾರತೀಯರು:ವರದಿ

Update: 2023-06-27 16:43 GMT

Photo: PTI

ಹೊಸದಿಲ್ಲಿ: ಕಳೆದೊಂದು ದಶಕ (2011-2022)ದಲ್ಲಿ ಸುಮಾರು 70,000 ಭಾರತೀಯರು ತಮ್ಮ ಪಾಸ್‌ಪೋರ್ಟ್‌‌‌‌‌‌ಗಳನ್ನು ಮರಳಿಸಿದ್ದಾರೆ ಎಂದು ಆರ್ ಟಿ ಐ ಅರ್ಜಿಯೊಂದಕ್ಕೆ ಸರಕಾರದ ಉತ್ತರವನ್ನು ಉಲ್ಲೇಖಿಸಿ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಈ ಸಂಖ್ಯೆಯು ಪ್ರಾದೇಶಿಕ ಕಚೇರಿಗಳಿಗೆ ಮರಳಿಸಲಾದ ಪಾಸ್‌ಪೋರ್ಟ್‌‌‌‌‌‌ಗಳನ್ನು ಮಾತ್ರ ಒಳಗೊಂಡಿದೆ. ವಿದೇಶಗಳಲ್ಲಿಯ ಭಾರತೀಯ ರಾಯಭಾರ ಕಚೇರಿಗಳಲ್ಲಿ ವಾಪಸ್ ಮಾಡಲಾದ ಪಾಸ್‌ಪೋರ್ಟ್‌‌‌‌‌‌ಗಳು ಇದರಲ್ಲಿ ಸೇರಿಲ್ಲ.

ಮರಳಿಸಲಾಗಿರುವ 69,303 ಪಾಸ್‌ಪೋರ್ಟ್‌‌‌‌‌‌ಗಳ ಪೈಕಿ ಅತ್ಯಂತ ಹೆಚ್ಚಿನ,28,031 (ಶೇ.40.45) ಪಾಸ್‌ಪೋರ್ಟ್‌‌‌‌‌‌ಗಳು ಗೋವಾ ಪಾಸ್‌ಪೋರ್ಟ್‌‌‌‌‌‌ ಕಚೇರಿಗೆ ವಾಪಸ್ ಆಗಿದ್ದು, ಪಂಜಾಬ್ ಮತ್ತು ಗುಜರಾತ್ ಪಾಸ್‌ಪೋರ್ಟ್‌‌‌‌‌‌ ಕಚೇರಿಗಳು ನಂತರದ ಸ್ಥಾನಗಳಲ್ಲಿವೆ.

ಆದರೆ 2011ರಿಂದ ಮರಳಿಸಲಾಗಿರುವ ಪಾಸ್‌ಪೋರ್ಟ್‌‌‌‌‌‌ಗಳ ಸಂಖ್ಯೆಯು ಈ ಅವಧಿಯಲ್ಲಿ ಭಾರತೀಯ ಪೌರತ್ವವನ್ನು ತೊರೆದಿರುವವರ ಸಂಖ್ಯೆಯ ಸಣ್ಣ ಭಾಗವನ್ನು ಮಾತ್ರ ಪ್ರತಿನಿಧಿಸುತ್ತದೆ.

2011 ಮತ್ತು ಕಳೆದ ವರ್ಷದ ಅ.31ರ ನಡುವೆ 16.21 ಲ.ಕ್ಕೂ ಅಧಿಕ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸಹಾಯಕ ವಿದೇಶಾಂಗ ಸಚಿವ ವಿ.ಮುರಳೀಧರನ್ ಅವರು ಕಳೆದ ಮಾರ್ಚ್ನಲ್ಲಿ ಲೋಕಸಭೆಯಲ್ಲಿ ತಿಳಿಸಿದ್ದರು.

ಭಾರತೀಯ ಕಾನೂನುಗಳು ಭಾರತೀಯ ಮೂಲದ ವ್ಯಕ್ತಿಗಳಿಗೆ ದ್ವಿಪೌರತ್ವವನ್ನು ಅನುಮತಿಸುವುದಿಲ್ಲ. ಇತರ ಯಾವುದೇ ದೇಶದ ಪಾಸ್ಪೋರ್ಟ್ ಪಡೆದವರು ತಮ್ಮ ಭಾರತೀಯ ಪಾಸ್‌ಪೋರ್ಟ್‌‌‌‌‌‌ಗಳನ್ನು ಮರಳಿಸಬೇಕಾಗುತ್ತದೆ.

2011ರಲ್ಲಿ ಕೇವಲ 239 ಪಾಸ್‌ಪೋರ್ಟ್‌‌‌‌‌‌ಗಳನ್ನು ತ್ಯಜಿಸಲಾಗಿತ್ತು ಎನ್ನುವುದನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ಸ್ವೀಕರಿಸಿರುವ ಆರ್ ಟಿ ಐ ಉತ್ತರವು ತೋರಿಸಿದೆ. ಈ ಸಂಖ್ಯೆಯು 2012ರಲ್ಲಿ 11,492ಕ್ಕೆ ಮತ್ತು 2013ರಲ್ಲಿ 23,511ಕ್ಕೆ ಏರಿಕೆಯಾಗಿತ್ತು. ಅಲ್ಲಿಂದೀಚಿಗೆ ಪ್ರತಿ ವರ್ಷ ಈ ಸಂಖ್ಯೆಯು 2,000ದಿಂದ 4,000ರ ನಡುವೆ ಉಳಿದುಕೊಂಡಿದೆ.

2012 ಮತ್ತು 2013ನ್ನು ಹೊರತುಪಡಿಸಿ ಈ ಎಲ್ಲ ವರ್ಷಗಳಲ್ಲಿ ಈ ಪಟ್ಟಿಯಲ್ಲಿ ಗೋವಾ ಅಗ್ರಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News