3 ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಬಂದಿದ್ದ ಹೂಡಿಕೆ ಪ್ರಸ್ತಾವಗಳು 84,544 ಕೋಟಿ ರೂ., ಈವರೆಗಿನ ಹೂಡಿಕೆ 2,518 ಕೋಟಿ ರೂ.ಮಾತ್ರ

Update: 2023-12-12 11:30 GMT

ಜಮ್ಮು-ಕಾಶ್ಮೀರ | Photo: PTI 

ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ 370ನೇ ವಿಧಿಯ ರದ್ದತಿ ಕುರಿತು ವಿಚಾರಣೆ ಸಂದರ್ಭದಲ್ಲಿ ಕೇಂದ್ರವು ಅದು ‘ಅಭಿವೃದ್ಧಿ ಮತ್ತು ಪ್ರಗತಿ ’ಗೆ ಅಡ್ಡಿಯಾಗಿತ್ತು ಮತ್ತು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ 2019, ಆ.5ರ ನಿರ್ಧಾರಗಳ ಬಳಿಕ ಜಮ್ಮು-ಕಾಶ್ಮೀರಕ್ಕೆ ಹೂಡಿಕೆಗಳು ಹರಿದುಬರತೊಡಗಿವೆ ಎಂದು ಪದೇ ಪದೇ ವಾದಿಸಿತ್ತು. ಆದರೆ ವಾಸ್ತವವು ಕೊಂಚ ಭಿನ್ನವಾಗಿದೆ.

ಜಮ್ಮು-ಕಾಶ್ಮೀರ ಸರಕಾರವು ಜನವರಿ 2021ರಲ್ಲಿ ನೂತನ ಕೈಗಾರಿಕಾ ನೀತಿಯನ್ನು ಪ್ರಕಟಿಸಿದ ಬಳಿಕ ಹೆಚ್ಚುಕಡಿಮೆ ಈ ಮೂರು ವರ್ಷಗಳಲ್ಲಿ ಈ ಕೇಂದ್ರಾಡಳಿತ ಪ್ರದೇಶವು 42 ಕೈಗಾರಿಕಾ ಕ್ಷೇತ್ರಗಳಲ್ಲಿ 84,544 ಕೋ.ರೂ.ಮೌಲ್ಯದ ಹೂಡಿಕೆ ಪ್ರಸ್ತಾವಗಳನ್ನು ಸ್ವೀಕರಿಸಿದೆ. ಆದಾಗ್ಯೂ ಈ ಪೈಕಿ ಹೆಚ್ಚಿನ ಪ್ರಸ್ತಾವಗಳು ಕಾರ್ಯಗತಗೊಂಡಿಲ್ಲ.

ಈವರೆಗೆ 414 ಕೈಗಾರಿಕಾ ಘಟಕಗಳು (ಜಮ್ಮುವಿನಲ್ಲಿ 266 ಮತ್ತು ಕಾಶ್ಮೀರದಲ್ಲಿ 148) ನೋಂದಣಿಗೊಂಡಿದ್ದು,ಇವು ಸ್ವೀಕರಿಸಿರುವ ನೈಜ ಹೂಡಿಕೆ ಕೇವಲ 2,418 ಕೋಟಿ ರೂ.ಗಳಾಗಿವೆ. ಅಂದರೆ ಕೇವಲ ಶೇ.3ರಷ್ಟು ಪ್ರಸ್ತಾವಗಳು ಕಾರ್ಯಗತಗೊಂಡಿವೆ. ಇದೇ ವೇಳೆ ಜಮ್ಮು-ಕಾಶ್ಮೀರ ಆಡಳಿತವು ಪ್ರಸ್ತಾವಿತ ಘಟಕಗಳಿಗೆ ಭೂಮಿಯ ಮೌಲ್ಯವಾಗಿ 13,777 ಕೋ.ರೂ.ಗಳನ್ನು ಸ್ವೀಕರಿಸಿದೆ.

ಮಾಧ್ಯಮ ವರದಿಯಂತೆ ಅರ್ಧಕ್ಕೂ ಹೆಚ್ಚಿನ,ಸುಮಾರು ಶೇ.60ರಷ್ಟು ಹೂಡಿಕೆಗಳು ಜಮ್ಮುವಿಗಾಗಿದ್ದರೆ,ಉಳಿದವು ಕಾಶ್ಮೀರಕ್ಕಾಗಿವೆ. ಆದಾಗ್ಯೂ ಈ ಒಟ್ಟು 6,117 ಪ್ರಸ್ತಾವಗಳ ಪೈಕಿ ಕೇವಲ ಶೇ.25ರಷ್ಟು ಅಥವಾ 1551 ಪ್ರಸ್ತಾವಗಳು ಜಮ್ಮುವಿಗಾಗಿ ಸಲ್ಲಿಕೆಯಾಗಿವೆ. ಉಳಿದ 4,566 ಪ್ರಸ್ತಾವಗಳು ಕಾಶ್ಮೀರಕ್ಕೆ ಸಂಬಂಧಿಸಿದ್ದು,34,006 ಕೋಟಿ ರೂ.ಗಳ ಹೂಡಿಕೆಯನ್ನು ಒಳಗೊಂಡಿವೆ. ಈ ಪ್ರಸ್ತಾವಗಳು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಸರಕಾರವು ಆಶಿಸಿದೆ.

ಆದರಾತಿಥ್ಯ ಕ್ಷೇತ್ರದಲ್ಲಿ ಜಮ್ಮು-ಕಾಶ್ಮೀರದ ಸಾಮರ್ಥ್ಯ ಹೆಚ್ಚು ಬಳಕೆಯಾಗದೆ ಉಳಿದುಕೊಂಡಿದೆ. ಈ ಕೇತ್ರದಲ್ಲಿ ಹೂಡಿಕೆ ಪ್ರಸ್ತಾವಗಳು ನಿರೀಕ್ಷೆಗಿಂತ ಕಡಿಮೆಯಾಗಿದ್ದು,ಹೋಟೆಲ್ಗಳ ಸ್ಥಾಪನೆಗಾಗಿ ಈವರೆಗಿನ ಹೂಡಿಕೆ ಪ್ರಸ್ತಾವಗಳ ಒಟ್ಟು ಮೊತ್ತ ಕೇವಲ 87 ಕೋ.ರೂ.ಗಳಾಗಿವೆ.

ಈ ಕ್ಷೇತ್ರದಲ್ಲಿ ಸೂಕ್ತ ತಾಣದಲ್ಲಿ ಭೂಮಿಯ ಲಭ್ಯತೆ ಅಗತ್ಯವಾಗಿದೆ. ಹೋಟೆಲ್ ವೀಕ್ಷಣೆಗಾಗಿ ನೈಸರ್ಗಿಕ ಸೌಂದರ್ಯದ ಪರಿಸರವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ನಿರೀಕ್ಷಿತ ವೇಗದಲ್ಲಿ ಪ್ರಗತಿಯಾಗಿಲ್ಲ. ಕಣಿವೆಯಲ್ಲಿ ಮೊದಲಿನಿಂದಲೂ ಪ್ರವಾಸಿಗಳಿಗೆ ತಂಗಲು ಸೂಕ್ತ ಕೊಠಡಿಗಳ ಕೊರತೆಯಿದೆ ಎಂದು ದಿಲ್ಲಿಯಲ್ಲಿಯ ಅಧಿಕಾರಿಯೋರ್ವರು ತಿಳಿಸಿದರು.

ಗಮನಾರ್ಹವಾಗಿ ಜಿ-20ರ ಪ್ರವಾಸೋದ್ಯಮ ಸಭೆಗಾಗಿ ಸರಕಾರವು ವಿದೇಶಿ ಪ್ರತಿನಿಧಿಗಳನ್ನು ಕಾಶ್ಮೀರಕ್ಕೆ ಕರೆದೊಯ್ದಿತ್ತು ಮತ್ತು ಅಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳುತ್ತಿದೆ ಎಂದು ಹೇಳಿಕೊಂಡಿತ್ತು. ಸರ್ವೋಚ್ಚ ನ್ಯಾಯಾಲಯದಲ್ಲಿ 370ನೇ ವಿಧಿ ರದ್ದತಿಯ ಪರವಾಗಿ ವಾದಿಸಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,‘ತಾವೇನು ಕಳೆದುಕೊಂಡಿದ್ದೆವು ಎನ್ನುವುದು ಜನರಿಗೆ ಈಗ ಅರ್ಥವಾಗಿದೆ. ಈಗ ಜಮ್ಮು-ಕಾಶ್ಮೀರಕ್ಕೆ ಹೂಡಿಕೆಗಳು ಹರಿದುಬರುತ್ತಿವೆ. ಪೋಲಿಸ್ ವ್ಯವಸ್ಥೆಯು ಕೇಂದ್ರದ ನಿಯಂತ್ರಣದಲ್ಲಿರುವುದರಿಂದ ಪ್ರವಾಸೋದ್ಯಮವು ಮತ್ತೆ ಚಿಗುರಿದೆ,ಈಗಾಗಲೇ 16 ಲ.ಪ್ರವಾಸಿಗಳು ಅಲ್ಲಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದರು.

ಜೆಎಸ್ಡಬ್ಲ್ಯು ಮತ್ತು ಎಚ್ಎಫ್ಸಿಎಲ್ನಂತಹ ಕೆಲವು ದೊಡ್ಡ ಕಂಪನಿಗಳು ಜಮ್ಮು-ಕಾಶ್ಮೀರದಲ್ಲಿ ಕೊಂಚ ಹೂಡಿಕೆಯನ್ನು ಮಾಡಿವೆಯಾದರೂ ಅಪೋಲೊ ಹಾಸ್ಪಿಟಲ್ನಂತಹ ಇತರ ಕಂಪನಿಗಳು ಆರಂಭದಲ್ಲಿ ಆಸಕ್ತಿಯನ್ನು ತೋರಿಸಿದ ಬಳಿಕ ಮತ್ತೆ ಮುಂದುವರಿದಿಲ್ಲ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News