MGNREGS ಅಡಿಯಲ್ಲಿ ನೋಂದಾಯಿತ 84.8 ಲಕ್ಷ ಕಾರ್ಮಿಕರ ಹೆಸರು ಡಿಲಿಟ್: ವರದಿ
ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGS) ಅಡಿಯಲ್ಲಿ ನೋಂದಾಯಿತ 84.8 ಲಕ್ಷ ಕಾರ್ಮಿಕರ ಹೆಸರನ್ನು ಈ ವರ್ಷದ ಎಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಪಟ್ಟಿಯಿಂದ ಅಳಿಸಲಾಗಿದೆ ಎಂದು ʼಲಿಬ್ ಟೆಕ್ʼ ವರದಿಯು ತಿಳಿಸಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪಟ್ಟಿಯಿಂದ ತಮಿಳುನಾಡಿನಲ್ಲಿ ಹೆಚ್ಚಿನ ಸಂಖ್ಯೆಯ ಅಂದರೆ 14.7% ಕಾರ್ಮಿಕರನ್ನು ತೆಗೆದು ಹಾಕಲಾಗಿದೆ. ಆ ಬಳಿಕದ ಸ್ಥಾನದಲ್ಲಿ14.6% ಕಾರ್ಮಿಕರನ್ನು ಛತ್ತೀಸ್ಗಢದಲ್ಲಿ ತೆಗೆದು ಹಾಕಲಾಗಿದೆ. ಇದೇ ಅವಧಿಯಲ್ಲಿ ಪಟ್ಟಿಗೆ 45.4 ಲಕ್ಷ ಹೊಸ ಕಾರ್ಮಿಕರು ಸೇರ್ಪಡೆಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ. 2022-23 ಮತ್ತು 2023-24ರ ಆರ್ಥಿಕ ವರ್ಷಗಳಲ್ಲಿ MGNREGS ನೋಂದಾವಣೆಗೊಂಡಿದ್ದ 8 ಕೋಟಿ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಲಿಬ್ ಟೆಕ್ ವರದಿಯು ತಿಳಿಸಿದೆ.
ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಅಳಿಸಿ ಹಾಕಿರುವ ಈ ಬೆಳವಣಿಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ʼಲಿಬ್ ಟೆಕ್ʼ ವರದಿ ಹೇಳಿದೆ. ಜನವರಿ 2023ರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು MGNREG ನೋಂದಾವಣಿ ವೇಳೆ ABPS(ಆಧಾರ್ ಆಧಾರಿತ ಪಾವತಿ ವ್ಯವಸ್ಥೆ) ಕಡ್ಡಾಯಗೊಳಿಸಿದೆ. ABPSಗೆ ಅರ್ಹತೆ ಪಡೆಯಲು, ಕಾರ್ಮಿಕರು ಆಧಾರ್ ಅನ್ನು ಅವರ ಜಾಬ್ ಕಾರ್ಡ್ ಗೆ ಲಿಂಕ್ ಮಾಡಬೇಕು, ಆಧಾರ್ ನಲ್ಲಿರುವ ಹೆಸರು ಜಾಬ್ ಕಾರ್ಡ್ ನಲ್ಲಿರುವ ಹೆಸರಿಗೆ ಹೊಂದಿಕೆಯಾಗಬೇಕು ಮತ್ತು ಅವರ ಬ್ಯಾಂಕ್ ಖಾತೆಯು ಆಧಾರ್ ಗೆ ಲಿಂಕ್ ಆಗಿರಬೇಕು ಸೇರಿದಂತೆ ಹಲವು ಷರತ್ತುಗಳನ್ನು ಪೂರೈಸಬೇಕಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿರ್ವಹಿಸುವ MGNREGA ಪೋರ್ಟಲ್ ನಲ್ಲಿ ಲಭ್ಯವಿರುವ ಸಾರ್ವಜನಿಕ ಮಾಹಿತಿಯನ್ನು ʼಲಿಬ್ ಟೆಕ್ʼ ವಿಶ್ಲೇಷಣೆ ನಡೆಸಿದ್ದು, ಎಲ್ಲಾ ನೋಂದಾಯಿತ ಕೆಲಸಗಾರರಲ್ಲಿ 27.4% ಅಂದರೆ 6.7 ಕೋಟಿ ಕಾರ್ಮಿಕರು ಮತ್ತು 4.2% ಸಕ್ರಿಯ ಕಾರ್ಮಿಕರು ಅಂದರೆ 54 ಲಕ್ಷ ಸಕ್ರಿಯ ಕಾರ್ಮಿಕರು ABPSಗೆ ಅನರ್ಹರಾಗಿದ್ದಾರೆ. ಈ ಬೆಳವಣಿಗೆ ಕಾರ್ಮಿಕರನ್ನು ನಿರುತ್ಸಾಹಗೊಳಿಸಿದೆ ಮತ್ತು ಕಾರ್ಮಿಕರ ವಲಸೆಯನ್ನು ಹೆಚ್ಚಿಸಿವೆ. ಲಿಬ್ ಟೆಕ್ ವರದಿಯ ಪ್ರಕಾರ, ಸಕ್ರಿಯ ಕೆಲಸಗಾರರಲ್ಲಿ 8% ಇಳಿಕೆಯಾಗಿದೆ. ಅಕ್ಟೋಬರ್ 2023ರಲ್ಲಿ 14.3 ಕೋಟಿ ಸಕ್ರಿಯ ಕಾರ್ಮಿಕರಿದ್ದರು, ಈ ಸಂಖ್ಯೆ ಅಕ್ಟೋಬರ್ 2024ರಲ್ಲಿ 13.2 ಕೋಟಿಗೆ ಇಳಿದಿದೆ.