ದೇಶದಲ್ಲಿ 86 ವಿದ್ಯುತ್ ಸ್ಥಾವರಗಳು ವಾಡಿಕೆಯ ಶೇ.25ರಷ್ಟು ಕಡಿಮೆ ಕಲ್ಲಿದ್ದಲು ದಾಸ್ತಾನು ಹೊಂದಿವೆ: ಸಿಇಎ ವರದಿ
ಹೊಸದಿಲ್ಲಿ: ದೇಶದಲ್ಲಿ 86 ಉಷ್ಣ ವಿದ್ಯುತ್ ಸ್ಥಾವರಗಳು ಅ.18ಕ್ಕೆ ಇದ್ದಂತೆ ಕಳವಳಕಾರಿ ಮಟ್ಟದಲ್ಲಿ ಕಲ್ಲಿದ್ದಲು ದಾಸ್ತಾನನ್ನು ಹೊಂದಿವೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸಿಎಎ)ದ ದೈನಂದಿನ ವರದಿಯು ತಿಳಿಸಿದೆ. ಇವುಗಳಲ್ಲಿ ಆಮದು ಒಣ ಇಂಧನ-ಆಧಾರಿತ ಆರು ಸ್ಥಾವರಗಳೂ ಸೇರಿವೆ.
ಒಣ ಇಂಧನದ ದಾಸ್ತಾನು ವಾಡಿಕೆಯ ಶೇ.25ಕ್ಕೂ ಕಡಿಮೆ ಇದ್ದರೆ ಅಂತಹ ವಿದ್ಯುತ್ ಸ್ಥಾವರಗಳನ್ನು ಕಳವಳಕಾರಿ ಮಟ್ಟದಲ್ಲಿ ಕಲ್ಲಿದ್ದಲು ದಾಸ್ತಾನು ಹೊಂದಿವೆ ಎಂದು ಹೇಳಲಾಗುತ್ತದೆ.
ಸಿಇಎ ದೇಶದಲ್ಲಿಯ 181 ಆಮದು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಮೇಲ್ವಿಚಾರಣೆಯನ್ನು ಹೊಂದಿದ್ದು, ಈ ಸ್ಥಾವರಗಳು ಒಟ್ಟು 206 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೊಂದಿವೆ.
ಸಿಇಎ ವರದಿಯಂತೆ ಒಟ್ಟು 149 ಗಿಗಾವ್ಯಾಟ್ ಸಾಮರ್ಥ್ಯದ 148 ಪಿಟ್ಹೆಡ್ ಅಲ್ಲದ ಸ್ಥಾವರಗಳು ವಾಡಿಕೆಯ ಶೇ.29ರಷ್ಟು ಕಡಿಮೆ ಒಣ ಇಂಧನ ದಾಸ್ತಾನು ಹೊಂದಿವೆ. ಇವುಗಳ ಒಟ್ಟು ಸಾಮಾನ್ಯ ದಾಸ್ತಾನು ಮಟ್ಟ 43.53 ಮಿ.ಟ.ಗಳಾಗಿದ್ದು,ಅ.18ರಂದು ಸುಮಾರು 12.77 ಮಿ.ಟ.ದಾಸ್ತಾನು ಹೊಂದಿದ್ದವು. ಆದರೆ ದೇಶಿಯ 18 ಪಿಟ್ಹೆಡ್ ಸ್ಥಾವರಗಳಲ್ಲಿ ಪರಿಸ್ಥಿತಿ ಉತ್ತಮವಾಗಿದ್ದು ಅವು ಸಾಮಾನ್ಯ ಮಟ್ಟದ ಶೇ.81ರಷ್ಟು ದಾಸ್ತಾನು ಹೊಂದಿದ್ದವು. ಈ 18 ಪಿಟ್ಹೆಡ್ ಸ್ಥಾವರಗಳು ಒಟ್ಟು 40 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.
ತಜ್ಞರ ಅಭಿಪ್ರಾಯದಂತೆ ಪಿಟ್ಹೆಡ್ ಸ್ಥಾವರಗಳು ಕಲ್ಲಿದ್ದಲು ಗಣಿಗಳ ಸಮೀಪದಲ್ಲಿಯೇ ಇರುವುದರಿಂದ ಸಾಮಾನ್ಯವಾಗಿ ಒಣ ಇಂಧನ ದಾಸ್ತಾನಿನಲ್ಲಿ ಕೊರತೆ ಕಂಡು ಬರುವುದು ಕಡಿಮೆ. ಪಿಟ್ಹೆಡ್ ಅಲ್ಲದ ಸ್ಥಾವರಗಳು ಕಲ್ಲಿದ್ದಲು ಗಣಿಗಳಿಂದ ತುಂಬ ದೂರದಲ್ಲಿರುತ್ತವೆ.
ಸಿಇಎ ಮೇಲ್ವಿಚಾರಣೆಯಲ್ಲಿರುವ 15 ಆಮದು ಕಲ್ಲಿದ್ದಲು-ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿಯೂ ಒಟ್ಟಾರೆ ಒಣ ಇಂಧನ ದಾಸ್ತಾನು ಸ್ಥಿತಿ ಉತ್ತಮವಾಗಿಯೇ ಇದ್ದು,ಸಾಮಾನ್ಯ ಮಟ್ಟದ ಶೇ.52ರಷ್ಟು ದಾಸ್ತಾನು ಹೊಂದಿವೆ. ಇವು ಒಟ್ಟು 17 ಗಿಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.
ಒಟ್ಟು 206 ಗಿಗಾವ್ಯಾಟ್ ಸಾಮರ್ಥ್ಯದ 181 ವಿದ್ಯುತ್ ಸ್ಥಾವರಗಳು ಅ.18ರಂದು 54,31 ಮಿ.ಟ.ಗಳ ಸಾಮಾನ್ಯ ಮಟ್ಟಕ್ಕೆ ಹೋಲಿಸಿದರೆ 20.43 ಮಿ.ಟ. (ಶೇ.38) ಕಲ್ಲಿದ್ದಲು ದಾಸ್ತಾನು ಹೊಂದಿದ್ದವು. ಈ 181 ಸ್ಥಾವರಗಳ ದೈನಂದಿನ ಅಗತ್ಯ 2.8 ಮಿ.ಟ.ಗಳು ಎಂದು ವರದಿಯು ತಿಳಿಸಿದೆ. ಹೀಗಾಗಿ ಅ.18ಕ್ಕೆ ಇದ್ದಂತೆ ಅವುಗಳ ಬಳಿಯಿರುವ ದಾಸ್ತಾನು ಏಳು ದಿನಗಳಿಗಿಂತ ಕೊಂಚ ಹೆಚ್ಚು ಕಾಲ ಸಾಲಬಹುದು.