ಕಳೆದ ವರ್ಷ 99 ಪತ್ರಕರ್ತರ ಹತ್ಯೆ, ಈ ಪೈಕಿ ಗಾಝಾ ಯುದ್ಧದಲ್ಲಿ ಕೊಲ್ಲಲ್ಪಟ್ಟವರ ಸಂಖ್ಯೆ 77

Update: 2024-02-16 14:49 GMT

Photo: PTI

ಹೊಸದಿಲ್ಲಿ: 99 ಹತ್ಯೆಗಳೊಂದಿಗೆ 2023 ಕಳೆದೊಂದು ದಶಕದಲ್ಲಿ ಪತ್ರಕರ್ತರ ಪಾಲಿಗೆ ಅತ್ಯಂತ ಮಾರಣಾಂತಿಕ ವರ್ಷವಾಗಿತ್ತು ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್(ಸಿಪಿಜೆ) ಹೇಳಿದೆ. ಈ ಪೈಕಿ 77 ಪತ್ರಕರ್ತರು ಗಾಝಾದ ಮೇಲೆ ಇಸ್ರೇಲ್ ಯುದ್ಧದ ವರದಿಗಾರಿಕೆ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದಾರೆ.

ಗಾಝಾ, ಇಸ್ರೇಲ್ ಮತ್ತು ಲೆಬನಾನ್ಗಳಲ್ಲಿ ಸಾವುಗಳು ಸಂಭವಿಸಿರದಿದ್ದರೆ ಜಾಗತಿಕವಾಗಿ ಪತ್ರಕರ್ತರ ಹತ್ಯೆಗಳು ಕಳೆದ ವರ್ಷಕ್ಕಿಂತ ಕಡಿಮೆಯಾಗಿರುತ್ತಿದ್ದವು ಎಂದು ಸಿಪಿಜೆ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಯಾವುದೇ ದೇಶದಲ್ಲಿ ಇಡೀ ವರ್ಷದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರಿಗಿಂತ ಹೆಚ್ಚಿನ ಸಂಖ್ಯೆಯ ಪತ್ರಕರ್ತರು ಇಸ್ರೇಲ್-ಗಾಝಾ ಯುದ್ಧದ ಮೊದಲ ಮೂರು ತಿಂಗಳುಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಸಿಪಿಜೆ 2023, ಡಿಸೆಂಬರ್ ನಲ್ಲಿ ವರದಿ ಮಾಡಿತ್ತು.

ಗಾಝಾ ಯುದ್ಧದಲ್ಲಿ ಕೊಲ್ಲಲ್ಪಟ್ಟ 77 ಪತ್ರಕರ್ತರ ಪೈಕಿ 72 ಜನರು ಫೆಲೆಸ್ತೀನಿಗಳಾಗಿದ್ದರೆ, ಮೂವರು ಲೆಬ್ನಾನ್ ಮತ್ತು ಇಬ್ಬರು ಇಸ್ರೇಲ್ಗೆ ಸೇರಿದವರಾಗಿದ್ದಾರೆ.

ಗಾಝಾದಲ್ಲಿ ಪತ್ರಕರ್ತರು ಮುಂಚೂಣಿಗಳಿಂದ ವರದಿಗಳನ್ನು ಮಾಡುತ್ತಾರೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಸಿಪಿಜೆಯ ಮುಖ್ಯ ಕಾರ್ಯ ನಿರ್ವಾಹಕ ಜೋಡೀ ಗಿನ್ಸ್ಬರ್ಗ್ ಅವರು,‘ಈ ಯುದ್ಧದಲ್ಲಿ ಫೆಲೆಸ್ತೀನಿ ಪತ್ರಕರ್ತರು ಅನುಭವಿಸಿದ ಅಗಾಧ ನಷ್ಟವು ಫೆಲೆಸ್ತೀನ್ ಪ್ರದೇಶಗಳಲ್ಲಿ ಮಾತ್ರವಲ್ಲ, ಇಡೀ ಪ್ರದೇಶದಲ್ಲಿ ಮತ್ತು ಅದರಾಚೆಗೂ ಪತ್ರಿಕೋದ್ಯಮದ ಮೇಲೆ ದೀರ್ಘಕಾಲಿಕ ಪರಿಣಾಮಗಳನ್ನು ಬೀರಲಿದೆ. ಪ್ರತಿಯೋರ್ವ ಪತ್ರಕರ್ತನ ಹತ್ಯೆಯೂ ಜಗತ್ತಿನ ಕುರಿತು ನಮ್ಮ ತಿಳುವಳಿಕೆಗೆ ಇನ್ನಷ್ಟು ಹೊಡೆತವಾಗಿದೆ ’ಎಂದು ಹೇಳಿದರು.

ಸಿಪಿಜೆಯ ಪ್ರಾಥಮಿಕ ತನಿಖೆಗಳು ಗುರುವಾರದ ವೇಳೆಗೆ ಗಾಝಾ ಯುದ್ಧದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರ ಸಂಖ್ಯೆ 88ಕ್ಕೇರಿರುವುದನ್ನು ತೋರಿಸಿವೆ. ಆದರೆ ಅವರ ಸಾವುಗಳ ಸಂದ‘ರ್ಗಳ ಕುರಿತು ತನ್ನ ತನಿಖೆಯ ಬಳಿಕವೇ ಅವುಗಳನ್ನು ತನ್ನ ಡಾಟಾ ಬೇಸ್ ನೊಳಗೆ ಸೇರಿಸುವುದಾಗಿ ಸಿಪಿಜೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News