ಎ.10 ಮತ್ತು 12ರ ನಡುವೆ ಭಾರತದಲ್ಲಿ 126 ಜನರು ಸಿಡಿಲಿಗೆ ಬಲಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕಳೆದೆರಡು ದಿನಗಳಲ್ಲಿ ಮಧ್ಯ ಮತ್ತು ಪೂರ್ವ ಭಾರತದಲ್ಲಿ ಸಿಡಿಲು ಬಡಿದು ಕನಿಷ್ಠ 126 ಸಾವುಗಳು ಸಂಭವಿಸಿವೆ. ಹೆಚ್ಚಿನ ಸಾವುಗಳು ಉತ್ತರ ಪ್ರದೇಶ ಮತ್ತು ಬಿಹಾರದಿಂದ ವರದಿಯಾಗಿವೆ. ಎ.10 ಮತ್ತು 11ರಂದು ಈ ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಮುಂದಿನ ಕೆಲವು ದಿನಗಳ ಕಾಲ ಉತ್ತರಾಖಂಡ,ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪೂರ್ವ ಭಾರತದಲ್ಲಿ ತೀವ್ರ ಗಾಳಿ ಮತ್ತು ಆಲಿಕಲ್ಲು ಮಳೆಯೊಂದಿಗೆ ಪ್ರತಿಕೂಲ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು, ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ.
ಬಿಹಾರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ರಾಜ್ಯದಲ್ಲಿ ಎ.10 ಮತ್ತು 11ರ ನಡುವೆ ಗುಡುಗುಸಿಡಿಲಿನಿಂದಾಗಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ,ವಿಶೇಷವಾಗಿ ನೇಪಾಳ ಗಡಿ ಸಮೀಪ ಕನಿಷ್ಠ 23 ಜನರು ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ವರದಿ ಮಾಡಿದೆ. ಛತ್ತೀಸ್‌ಗಡದಲ್ಲಿ ಆರು,ಜಾರ್ಖಂಡ್‌ನಲ್ಲಿ ಐದು ಮತ್ತು ಒಡಿಶಾದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೇಪಾಳದಲ್ಲಿಯೂ ಕನಿಷ್ಠ ಎಂಟು ಜನರು ಸಿಡಿಲಿಗೆ ಬಲಿಯಾಗಿರುವುದು ದೃಢಪಟ್ಟಿದೆ.
ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದಂತಹ ಮಧ್ಯ ಭಾರತದ ರಾಜ್ಯಗಳು ಹಾಗೂ ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾದಂತಹ ಪೂರ್ವ ಭಾರತದ ರಾಜ್ಯಗಳು ಹೆಚ್ಚು ಸಿಡಿಲು ಉಂಟಾಗುವ ರಾಜ್ಯಗಳಾಗಿವೆ. ಬುಡಕಟ್ಟು ಪಂಗಡಗಳು ಮತ್ತು ಸಮಾಜದ ಕೆಳಸ್ತರಗಳು ಸಿಡಿಲ ದಾಳಿಗೆ ಹೆಚ್ಚಾಗಿ ಗುರಿಯಾಗುತ್ತವೆ. ಅವರ ಮನೆಗಳ ಮಾದರಿಗಳು ಮತ್ತು ಭೂಮಿಯ ಮೇಲಿನ ಅವಲಂಬನ ಈ ಅಪಾಯವನ್ನು ಹೆಚ್ಚಿಸಿವೆ.
ಆದರೂ ಐಎಂಡಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಪೂರ್ವ ಮತ್ತು ಮಧ್ಯ ಭಾರತದಲ್ಲಿ ಗುಡುಗುಸಿಡಿಲು ಸಹಿತ ಮಳೆಯಾಗುವ ಎಚ್ಚರಿಕೆಯನ್ನು ನೀಡಿರುವುದರಿಂದ ಈ ಸಾವುಗಳನ್ನು ತಡೆಯಬಹುದಾಗಿದೆ. ವ್ಯತಿರಿಕ್ತವಾಗಿ ಗುಜರಾತ್ ನಂತಹ ಪಶ್ಚಿಮದ ಪ್ರದೇಶಗಳು ಶಾಖದ ಅಲೆಗಳನ್ನು ಅನುಭವಿಸುವ ನಿರೀಕ್ಷೆಯಿದೆ.