ಶಾಲೆಯನ್ನು ಅರ್ಧದಲ್ಲೇ ತ್ಯಜಿಸಿದ್ದ ಕೇರಳದ ನೈರ್ಮಲ್ಯ ಕಾರ್ಮಿಕೆ ಬರೆದ ಪುಸ್ತಕ ವಿವಿ ಪಠ್ಯವಾಗಿ ಆಯ್ಕೆ

Update: 2024-08-16 16:21 GMT

Chengalchoolayile ente jeevitham

ತಿರುವನಂತಪುರ : ಶಾಲೆಯನ್ನು ಅರ್ಧದಲ್ಲೇ ತ್ಯಜಿಸಿದ್ದ ನೈರ್ಮಲ್ಯ ಕಾರ್ಮಿಕಳೊಬ್ಬಳು ತನ್ನ ಜೀವನದ ಅನುಭವಗಳನ್ನು ವಿವರಿಸಿ ಬರೆದಿದ್ದ ಪುಸ್ತಕವೊಂದು ಕೇರಳದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಹಾಗೂ ಎರಡು ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳ ಪಠ್ಯದ ಭಾಗವಾಗಿದೆ.

ತಿರುವನಂತಪುರದ ಸರಕಾರಿ ಕಾರ್ಯಾಲಯದ ಸಮೀಪದಲ್ಲೇ ಇರುವ ರಾಜಾಜಿನಗರದ (ಚೆಂಕಾಲ್ ಚೂಲಾ ಕಾಲನಿ ಎಂದೇ ಜನಪ್ರಿಯ) ನಿವಾಸಿ ಧನುಜಾ ಕುಮಾರಿ ಬರೆದಿರುವ ಚೆಂಕಲ್ ಚೂಲಾಯಿಲೆ ಎಂಡೆ ಜೀವಿತಂ (ಚೆಂಕಲ್ ಚೂಲಾದಲ್ಲಿ ನನ್ನ ಜೀವನ) ಮಲಯಾಳ ಕೃತಿಯನ್ನು ಕಲ್ಲಿಕೋಟೆ ವಿವಿಯ ಎಂಎ ಕೋರ್ಸ್‌ ನ ಹಾಗೂ ಕಣ್ಣೂರು ವಿವಿಯ ಬಿಎ ಕೋರ್ಸ್‌ ನ ಪಠ್ಯದ ಭಾಗವಾಗಿ ಮಾಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರು ಧನುಜಾ ಕುಮಾರಿ ಹಾಗೂ ಅವರ ಕುಟುಂಬ ಸದಸ್ಯರನ್ನು ಅತಿಥಿಗಳಾಗಿ ರಾಜಭವನಕ್ಕೆ ಆಹ್ವಾನಿಸಿದ್ದರು.

ಅತ್ಯಂತ ಹಿಂದುಳಿದ ವಾತಾವರಣದಿಂದ ಬಂದಿರುವ ತನಗೆ ರಾಜ್ಯಪಾಲರನ್ನು ಭೇಟಿಯಾಗುವ ಸಂದರ್ಭವು ದೊರೆಯುವುದೆಂದು ಕನಸಿನಲ್ಲೂ ಯೋಚಿಸಿರಲಿಲ್ಲವೆಂದು ಧನುಜಾಕುಮಾರಿ ಭಾವುಕರಾಗಿ ಹೇಳಿದ್ದಾರೆ.

ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿರುವ ಚೆಂಕಾಲ್ ಚೂಲಾ ಕಾಲನಿಯ ನಿವಾಸಿಗಳು ಎದುರಿಸುತ್ತಿರುವ ತಾರತಮ್ಯ, ಅವರ ಬದುಕು ಬವಣೆಗಳನ್ನು ಆಕೆ ಈ ಕೃತಿಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ. ಅಲ್ಲದೆ ಕೇರಳ ಮಂಡಲಂನಲ್ಲಿ ತನ್ನ ಪುತ್ರ ಕಲಿಯುತ್ತಿದ್ದಾಗ ಆತನಿಗಾದ ಕಹಿ ಅನುಭವಗಳನ್ನು ಕೂಡಾ ಅವರು ವಿವರಿಸಿದ್ದಾರೆ.

ಕಡು ಬಡತನದಿಂದಾಗಿ ಶಾಲೆಯನ್ನು ಅರ್ಧದಲ್ಲೇ ತ್ಯಜಿಸಿದ. ಧನುಜಾ ಕುಮಾರಿ ಈಗ ಮನೆಮನೆಯಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಹರಿತಾ ಕರ್ಮಸೇನಾದ ಸದಸ್ಯೆಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕರ್ತರ ತಂಡದ ಮೂಲಕ ತನಗೆ ಪರಿಚಯವಾದ ಬರಹಗಾರ್ತಿ ವಿಜಿಲಾ ಅವರು ಧನುಜಾಗೆ ಆಕೆ ಬರೆದಿದ್ದ ಪುಸ್ತಕವನ್ನು ಪ್ರಕಟಿಸುವಂತೆ ಪ್ರೇರೇಪಿಸಿದ್ದರು.

ಧನುಜಾ ಕುಮಾರಿಯ ಸಾಹಿತ್ಯ ಕೃಷಿಗೆ ಆಕೆಯ ಕುಟುಂಬಿಕರೂ ಬೆಂಬಲ ನೀಡಿದ್ದರು. ಆಕೆಯ ಪತಿ ಸತೀಶ್ ಅವರು ಚೆಂಡೆ ವಾದ್ಯ ಕಲಾವಿದರಾಗಿದ್ದರೆ, ಆಕೆಯ ಇಬ್ಬರು ಪುತ್ರರಾದ ನಿಧೀಶ್‌ ಹಾಗೂ ಸುಧೀಶ್ ಅವರು ಕೂಡಾ ಕಲಾವಿದರು.

ತನ್ನ ಮೊದಲ ಕೃತಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಪ್ರೇರಿತರಾದ ಧನುಜಾ ಕುಮಾರಿ, ಇದೀಗ ಚೆಂಕಾಲ್‌ ಚೂಲಾದ ಇತಿಹಾಸ ಕುರಿತ ಪುಸ್ತಕವನ್ನು ಬರೆಯ ಹೊರಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News