ಲೋಕಸಭೆಯಲ್ಲಿ ವೈಚಾರಿಕ ಚಿಂತನೆ ‘ವಿಧೇಯಕ’ ಮಂಡಿಸಿದ ಕಾಂಗ್ರೆಸ್ ಸಂಸದ

Update: 2024-07-28 16:57 GMT

ಲೋಕಸಭೆ | PTI 

 

ಹೊಸದಿಲ್ಲಿ : ಸಮಾಜದಲ್ಲಿ ವೈಚಾರಿಕ ಚಿಂತನೆ, ವಿಮರ್ಶಾತ್ಮಕ ದೃಷ್ಟಿಕೋನ ಮತ್ತು ಸಾಕ್ಷ್ಯ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಯನ್ನು ಉತ್ತೇಜಿಸುವುದಕ್ಕಾಗಿ ಕಾಂಗ್ರೆಸ್ ಸಂಸದರೊಬ್ಬರು ಲೋಕಸಭೆಯಲ್ಲಿ ಖಾಸಗಿ ಸದಸ್ಯರ ವಿಧೇಯಕವನ್ನು ಮಂಡಿಸಿದ್ದಾರೆ.

ಕೇರಳದ ಚಾಲಕುಡಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಬೆನ್ನಿ ಬೆಹನಾನ್ ಅವರು ಶುಕ್ರವಾರ 2024ನೇ ಸಾಲಿನ ‘ವೈಚಾರಿಕ ಚಿಂತನೆಗೆ ಉತ್ತೇಜನ ವಿಧೇಯಕ’ವನ್ನು ಮಂಡಿಸಿದ್ದಾರೆ. ಪ್ರಸ್ತಾವಿತ ಕಾಯ್ದೆಯ ನಿಯಮಾವಳಿಗಳ ಜಾರಿಗಾಗಿ ವೈಚಾರಿಕ ಚಿಂತನೆ ಹಾಗೂ ವಿಮರ್ಶಾತ್ಮಕ ಚಿಂತನೆ ಉತ್ತೇಜನಾ ಮಂಡಳಿಯನ್ನು ಸ್ಥಾಪನೆಯನ್ನು ಈ ವಿಧೇಯಕವು ಪ್ರಸ್ತಾವಿಸಿದೆ.

ಖಾಸಗಿ ಸದಸ್ಯರ ವಿಧೇಯಕವನ್ನು ಮಂಡಿಸಿ ಮಾತನಾಡಿದ ಬೆಹನಾನ್ ಅವರು ಸಮಾಜದಲ್ಲಿ ಮೂಢನಂಬಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈಚಾರಿಕ ಚಿಂತನೆಯನ್ನು ಉತ್ತೇಜಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರುವೈಚಾರಿಕ ಚಿಂತನೆಯನ್ನು ಉತ್ತೇಜಿಸಿದ್ದರು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದನ್ನು ಪ್ರೋತ್ಸಾಹಿಸಿದ್ದರು ಎಂದು ಕಾಂಗ್ರೆಸ್ ಸಂಸದ ತಿಳಿಸಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿಮರ್ಶಾತ್ಮಕ ಚಿಂತನೆ ಹಾಗೂ ವಿಭಿನ್ನ ದೃಷ್ಟಿಕೋನಗಳಿಗೆ ಉತ್ತೇಜನ ದೊರೆಯುತ್ತಿಲ್ಲ. ಯಾಕೆಂದರೆ ಪ್ರಧಾನಿ ಹಾಗೂ ಅವರ ಪಕ್ಷವು ಅವೈಚಾರಿಕ ಚಿಂತನೆ ಹಾಗೂ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಬೆಹಮಾನ್ ಆಪಾದಿಸಿದರು.

ವೈಚಾರಿಕ ಚಿಂತನೆ ಹಾಗೂ ವಿಮರ್ಶಾತ್ಮಕ ಚಿಂತನೆಗಳು ಪ್ರಗತಿಶೀಲ ಹಾಗೂ ತಿಳುವಳಿಕಸ್ಥ ಸಮಾಜದ ನಿರ್ಮಾಣಕ್ಕೆ ತಳಹದಿಯಾಗಿದೆ ಎಂದು ವಿಧೇಯಕವು ಹೇಳಿದೆ.

ವೈಚಾರಿಕ ಚಿಂತನೆಯ ಮೌಲ್ಯಗಳು, ಗೌರವಯುತ ಸಂವಾದ ಹಾಗೂ ಮುಕ್ತಮನಸ್ಕತೆಯ ಮೌಲ್ಯಗಳನ್ನು ಬೆಳೆಸುವ ಮೂಲಕ ವ್ಯಕ್ತಿಗಳು ಕಾರಣ ಹಾಗೂ ಪುರಾವೆ ಆಧಾರಿತ ರಚನಾತ್ಮಕ ಸಂಭಾಷಣೆಗಳಲ್ಲಿ ತೊಡಗುವಂತೆ ವ್ಯಕ್ತಿಗಳನ್ನು ಉತ್ತೇಜಿಸಬೇಕೆಂದು ವಿಧೇಯಕವು ಕರೆ ನೀಡಿದೆ.

ವೈಚಾರಿಕ ಚಿಂತನೆಗಳ ಉತ್ತೇಜನಕ್ಕೆ ಕೊಡುಗೆಯನ್ನು ನೀಡುವ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮಗಳ ಪ್ರಭಾವಶಾಲಿ ಪಾತ್ರವನ್ನು ಗುರುತಿಸುವಂತೆಯೂ ವಿಧೇಯಕವು ಕರೆ ನೀಡಿದೆ.

ಏನಿದು ಖಾಸಗಿ ಸದಸ್ಯರ ವಿಧೇಯಕ?

ಖಾಸಗಿ ಸದಸ್ಯರ ವಿಧೇಯಕವು ಸಚಿವರಲ್ಲದ ಲೋಕಸಭೆಯ ಸದಸ್ಯರು ಮಂಡಿಸುವ ಶಾಸನಾತ್ಮಕ ಪ್ರಸ್ತಾವನೆಯಾಗಿರುತ್ತದೆ. ಸರಕಾರದ ವಿಧೇಯಕಗಳಲ್ಲಿ ಪ್ರತಿನಿಧಿಸಲ್ಪಡದ ವಿಷಯಗಳ ಬಗ್ಗೆ ಸಂಸದರ ಗಮನಸೆಳೆಯುವುದು ಅಥವಾ ಹಾಲಿ ಕಾನೂನು ಚೌಕಟ್ಟಿನಲ್ಲಿ ಇರುವ ಸಮಸ್ಯೆಗಳು ಹಾಗೂ ಲೋಪದ ಬಗ್ಗೆ ಬೆಳಕು ಚೆಲ್ಲುವುದ ಖಾಸಗಿ ಸದಸ್ಯರ ವಿಧೇಯಕದ ಉದ್ದೇಶವಾಗಿರುತ್ತದೆ.

ಈವರೆಗೆ ಕೆಲವೇ ಕೆಲವು ಖಾಸಗಿ ಸದಸ್ಯರ ವಿಧೇಯಕಗಳಷ್ಟೇ ಕಾನೂನಾಗಿ ಜಾರಿಗೊಳ್ಳುವಲ್ಲಿ ಯಶಸ್ವಿಯಾಗಿವೆ.

‘‘ತಾನು ಜೈವಿಕವಾಗಿ ಜನಿಸಿಲ್ಲವೆಂದು ಪ್ರಧಾನಿ ಹೇಳುತ್ತಿರುವಾಗ ಹಾಗೂ 2014ರಿಂದೀಚೆಗೆ ವೈಚಾರಿಕ ಚಿಂತನೆಗೆ ಉತ್ತೇಜನ ದೊರೆಯದಿರುವ ಸಮಯದಲ್ಲಿ ಈ ವಿಧೇಯಕವು ಅತ್ಯಂತ ಮಹತ್ವವನ್ನು ಹೊಂದಿದೆ ’’ ಎಂದು ಸಂಸದ ಬೆನ್ನಿ ಬೆಹನಾನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News