ಗೋ ಸಾಗಾಟದಾರರ ಮೇಲಿನ ದಾಳಿಯ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದು ಪೊಲೀಸ್ ಕಾನ್‌ಸ್ಟೇಬಲ್‌ ಬಲಿ

Update: 2024-07-18 13:52 GMT

ಪೊಲೀಸ್ ಕಾನ್‌ಸ್ಟೇಬಲ್‌ ಯಾಕೂಬ್ | PC : X \ @asadowaisi

ಆಲಿಗಢ (ಉತ್ತರ ಪ್ರದೇಶ): ಶಂಕಿತ ಗೋ ಸಾಗಾಟದಾರರ ಮೇಲೆ ನಡೆಸಲಾದ ದಾಳಿಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡು ತಲೆಗೆ ಹೊಕ್ಕು ಪೊಲೀಸ್ ಕಾನ್‌ಸ್ಟೇಬಲ್‌ ಯಾಕೂಬ್ ಎಂಬುವವರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಆಲಿಗಢ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಗುಂಡೇಟು ಸಬ್ ಇನ್ಸ್‌ಪೆಕ್ಟರ್ ರಾಜೀವ್ ಅವರ ಸಿಕ್ಕಿ ಹಾಕಿಕೊಂಡಿದ್ದ ಪಿಸ್ತೂಲ್‌ನಿಂದ ಸಿಡಿದಿದೆ ಎಂದು ಹೇಳಲಾಗಿದೆ. ಅಧಿಕೃತ ವರದಿಗಳ ಪ್ರಕಾರ, ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತಮ್ಮ ಪಿಸ್ತೂಲ್ ಅನ್ನು ಸಬ್ ಇನ್ಸ್‌ಪೆಕ್ಟರ್ ರಾಜೀವ್ ದುರಸ್ತಿ ಮಾಡಲು ಯತ್ನಿಸುವಾಗ ಆಕಸ್ಮಿಕವಾಗಿ ಗುಂಡು ಸಿಡಿದಿದೆ ಎನ್ನಲಾಗಿದೆ.

ಆದರೆ, ಅನಿರೀಕ್ಷಿತವಾಗಿ ಪಿಸ್ತೂಕಿನಿಂದ ಸಿಡಿದಿರುವ ಗುಂಡು ಸಬ್ ಇನ್ಸ್‌ಪೆಕ್ಟರ್ ರಾಜೀವ್ ಅವರ ಹೊಟ್ಟೆಯನ್ನು ಸೀಳಿಕೊಂಡು ಪೊಲೀಸ್ ಕಾನ್‌ಸ್ಟೇಬಲ್‌ ಯಾಕೂಬ್ ಅವರ ತಲೆಗೆ ತೂರಿದೆ ಎಂದು ಹೇಳಲಾಗಿದೆ.

ಈ ಘಟನೆಯ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, "ಸಿಕ್ಕಿ ಹಾಕಿಕೊಂಡಿದ್ದ ಪಿಸ್ತೂಲಿನಿಂದ ಸಿಡಿದಿರುವ ಗುಂಡು ಸಬ್ ಇನ್ಸ್‌ಪೆಕ್ಟರ್ ಹೊಟ್ಟೆಯನ್ನು ಸೀಳಿಕೊಂಡು, ಯಾಕೂಬ್ ತಲೆಗೆ ತಗುಲಿದೆ, ಹಾಗಾದರೆ, ಗುಂಡು ಸಿಡಿದಾಗ ಯಾಕೂಬ್ ದೇಹವು ಯಾವ ಸ್ಥಾನದಲ್ಲಿತ್ತು? ಈ ಕುರಿತು ತನಿಖೆ ನಡೆಯಲಿದೆ ಎಂದು ನಾನು ಭಾವಿಸಿದ್ದೇನೆ" ಎಂದು ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News