ವಯನಾಡ್ ದುರಂತಕ್ಕೆ ಸಾಕ್ಷಿಯಾದ ಚಾಲಿಯಾರ್ ನದಿಯಲ್ಲಿ ತೇಲಿಬರುತ್ತಿವ ಶವಗಳ ಸಾಲು

Update: 2024-08-04 15:22 GMT

PC : PTI 

ವಯನಾಡ್ : ಕೇರಳದ ಮೂರು ಜಿಲ್ಲೆಗಳ ಜನರಿಗೆ ಜೀವನಾಡಿಯಾಗಿದ್ದ ಚಾಲಿಯಾರ್ ನದಿಯು, ಜುಲೈ 30ರಂದು ಭೂಕುಸಿತಗಳಿಂದಾಗಿ ವಯನಾಡಿನಲ್ಲಿ ಸಂಭವಿಸಿರುವ ವ್ಯಾಪಕ ವಿನಾಶಕ್ಕೆ ಸಾಕ್ಷಿಯಾಗಿ ಪರಿಣಮಿಸಿದೆ.

169 ಕಿ.ಮೀ. ವಿಸ್ತೀರ್ಣದ ಚಾಲಿಯಾರ್ ನದಿಯು, ವಯನಾಡು, ಮಲಪ್ಪುರಂ ಹಾಗೂ ಕಲ್ಲಿಕೋಟೆ ಜಿಲ್ಲೆಗಳಲ್ಲಿ ತನ್ನ ದಂಡೆಯಲ್ಲಿ ವಾಸಿಸುತ್ತಿರುವವರ ಸಾವಿರಾರು ಜನರ ಬದುಕನ್ನು ಪೋಷಿಸುತ್ತಾ ಬಂದಿದೆ. ಆದರೆ ಈಗ, ವಯನಾಡ್ ಭೂಕುಸಿತ ದುರಂತಲ್ಲಿ ಮೃತಪಟ್ಟವರ ಶವಗಳು ಚಾಲಿಯಾರ್‌ನಲ್ಲಿ ತೇಲಿ ಬರುತ್ತಿರುವ ಭಯಾನಕ ದೃಶ್ಯಗಳು ಕಂಡುಬರುತ್ತಿವೆ.

ಪಶ್ಚಿಮಘಟ್ಟದ ಎರಡು ಪ್ರಮುಖ ಉಪನದಿಗಳ ಸಂಗಮದಿದ ರೂಪುಗೊಂಡ ಈ ನದಿಯು, ವಯನಾಡ್‌ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಹೊತ್ತು ತರುತ್ತಿದೆ.

ವಯನಾಡ್‌ನಲ್ಲ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ನೌಕಾಪಡೆ, ಪೊಲೀಸರು, ಅಗ್ನಿಶಾಮಕದಳ ತಂಡಗಳು ಹಾಗೂ ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ರಕ್ಷಣಾ ಏಜೆನ್ಸಿಗಳು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಮೂರು ಮೃತದೇಹಗಳನ್ನು ಹಾಗೂ 13 ಮೃತದೇಹದ ಭಾಗಗಳನ್ನು ಶನಿವಾರ ನದಿಯಿಂದ ಹೊರತೆಗೆದಿದ್ದಾರೆ.

ಇದರೊಂದಿಗೆ ಚಾಲಿಯಾರ್ ನದಿಯಲ್ಲಿ ಇದುವರೆಗೆ 73 ಮೃತದೇಹಗಳು ಹಾಗೂ 132 ದೇಹದ ಭಾಗಗಳು ಪತೆಯಾದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಲ್ಲಿ ಪತ್ತೆಯಾದ ಮೃತದೇಹಗಳ ಪೈಕಿ 37 ಪುರುಷರು, 29 ಮಂದಿ ಮಹಿಳೆಯರು ಮೂವರು ಹುಡುಗರು ಹಾಗೂ ನಾಲ್ವರು ಬಾಲಕಿಯರು ಎಂದು ಮಲಪ್ಪುರಂ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

198 ಮೃತದೇಹಗಳು ಹಾಗೂ ಮೃತದೇಹಗಳ ಭಾಗಗಳ ಪರೀಕ್ಷೆಯನ್ನು ನಡೆಸಲಾಗಿದ್ದು, ಆ ಪೈಕಿ 195 ಅನ್ನು ಮುಂದಿನ ಪ್ರಕ್ರಿಯೆಗಳಿಗಾಗಿ ವಯನಾಡಿಗೆ ಕಳುಹಿಸಿಕೊಡಲಾಗಿದೆ. ಉಳಿದ ಮೂರು ಮೃತದೇಹಗಳನ್ನು ಸಂಬಂಧಿಕರು ಪಡೆದುಕೊಂಡಿದ್ದಾರೆಂದು ಅವರು ಹೇಳಿದ್ದಾರೆ.

ಚಾಲಿಯಾರ್ ನದಿಯ 40 ಕಿ.ಮೀ.ದೂರದವರೆಗೂ ಶೋಧ ಕಾರ್ಯಾಚರಣೆಗಳು ಮುಂದುವರಿಯಲಿವೆಯೆಂದು ರಾಜ್ಯ ಸರಕಾರವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News