ಹಲ್ದ್ವಾನಿ ಹತ್ಯೆ ಪ್ರಕರಣದಲ್ಲಿ ತಿರುವು | ಬಿಹಾರ ಯುವಕನ ಸಾವಿಗೆ ಹಿಂಸಾಚಾರ ಕಾರಣವಲ್ಲ!
ಹಲ್ದ್ವಾನಿ (ಉತ್ತರಾಖಂಡ : ಕಳೆದ ವಾರ ಹಲ್ದ್ವಾನಿಯ ಬಂಬಲ್ಪುರ ಪ್ರದೇಶದಲ್ಲಿ ಮಸೀದಿ ಮತ್ತು ಮದರಸ ನೆಲಸಮದ ಬಳಿಕ ‘ಭುಗಿಲೆದ್ದಿದ್ದ ಹಿಂಸಾಚಾರದ ಸಂದ‘ರ್ದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ಬಿಹಾರದ ವ್ಯಕ್ತಿಯು ವಾಸ್ತವದಲ್ಲಿ ಗಲಭೆಗೆ ಸಂಬಂಧವೇ ಇಲ್ಲದಿದ್ದ ಘಟನೆಯಲ್ಲಿ ಕೊಲೆಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಪೋಲಿಸರ ಪ್ರಕಾರ ಪ್ರಕಾಶ ಕುಮಾರ ಸಿಂಗ್ ಪೋಲಿಸ್ ಕಾನ್ಸ್ಟೇಬಲ್ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಇದೇ ಕಾರಣಕ್ಕಾಗಿ ಪೋಲಿಸ್ ಕಾನ್ಸ್ಟೇಬಲ್ ತನ್ನ ಸಹಚರರೊಂದಿಗೆ ಸೇರಿಕೊಂಡು ಆತನ ಕೊಲೆ ಮಾಡಿದ್ದಾನೆ.
ಸಿಂಗ್ (24) ಕೆಲಸವನ್ನು ಹುಡುಕಿಕೊಂಡು ಹಲ್ದ್ವಾನಿಗೆ ಹೋಗಿದ್ದ ಎಂದು ಆತನ ಕುಟುಂಬವು ಈ ಮೊದಲು ತಿಳಿಸಿತ್ತು.
ಜ.8ರಂದು ಬಂಬಲ್ಪುರ ಪ್ರದೇಶದಲ್ಲಿ ಹಿಂಸಾಚಾರ ನಡೆದಿದ್ದು,ಮರುದಿನ ಅಲ್ಲಿಂದ 2-3 ಕಿ.ಮೀ.ದೂರದ ಪ್ರದೇಶದಲ್ಲಿ ತಲೆಗೆ ಗುಂಡೇಟಿನ ಗಾಯಗಳಿದ್ದ ಸಿಂಗ್ ಶವವು ಪತ್ತೆಯಾಗಿತ್ತು. ಪೋಲಿಸರು ಪ್ರಾಥಮಿಕ ತನಿಖೆಯ ಬಳಿಕ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಸಿಂಗ್ ಎರಡು ವರ್ಷಗಳಿಂದ ಸಿತಾರಗಂಜ್ ನ ಸೂರಜ್ ಎಂಬಾತನೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿದ್ದು, ಆಗಾಗ್ಗೆ ಆತನ ಮನೆಗೆ ‘ಭೇಟಿ ನೀಡುತ್ತಿದ್ದ. ಈ ಸಂದರ್ಭ ಆತ ಸೂರಜ್ನ ಸೋದರಿ ಹಾಗೂ ಉಮಸಿಂಗ್ ನಗರ ಠಾಣೆಯ ಪೋಲಿಸ್ ಕಾನ್ಸ್ಟೇಬಲ್ ಬೀರೇಂದ್ರ ಸಿಂಗ್ನ ಪತ್ನಿ ಪ್ರಿಯಾಂಕಾ ಜೊತೆ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡಿದ್ದ. ಬಳಿಕ ಆತ ವೀಡಿಯೊಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ,ಆದರೆ ಪ್ರಿಯಾಂಕಾ ತನ್ನ ಪತಿಯಿಂದ ಈ ವಿಷಯವನ್ನು ಮುಚ್ಚಿಟ್ಟಿದ್ದಳು. ಕೊಲೆಯ ಹಿಂದಿನ ದಿನ ಪ್ರಕಾಶ ಬೀರೇಂದ್ರಗೆ ಕರೆ ಮಾಡಿದ್ದ ಮತ್ತು ಬಳಿಕ ಪ್ರಿಯಾಂಕಾ ತನ್ನ ಪರಿಸ್ಥಿತಿಯನ್ನು ಪತಿಗೆ ತಿಳಿಸಿದ್ದಳು. ಬೀರೇಂದ್ರ ಪತ್ನಿ ಮತ್ತು ಸಹಚರ ನಯೀಮ್ ಖಾನ್ ಅಲಿಯಾಸ್ ಬಬ್ಲೂ ಜೊತೆಗೆ ಸೇರಿಕೊಂಡು ಸಿಂಗ್ ಕೊಲೆಗೆ ಸಂಚು ರೂಪಿಸಿದ್ದ. ಪ್ರಿಯಾಂಕಾಳ ಮೂಲಕ ಸಿಂಗ್ ನನ್ನು ಹಲ್ದ್ವಾನಿಗೆ ಕರೆಸಿಕೊಂಡಿದ್ದ. ಬೀರೇಂದ್ರ ಆಕೆಯ ವೀಡಿಯೊವನ್ನು ಮೊಬೈಲ್ನಿಂದ ಅಳಿಸುವಂತೆ ಸೂಚಿಸಿದ್ದ. ಸಿಂಗ್ ನಿರಾಕರಿಸಿದಾಗ ಬೀರೇಂದ್ರ ತನ್ನ ಸಹಚರರೊಂದಿಗೆ ಸೇರಿಕೊಂಡು ಗುಂಡಿಕ್ಕಿ ಸಿಂಗ್ ಹತ್ಯೆ ಮಾಡಿದ್ದ ಎಂದು ನೈನಿತಾಲ್ ಎಸ್ಎಸ್ಪಿ ಪಿ.ಎನ್.ಮೀನಾ ತಿಳಿಸಿದರು.
ಬೀರೇಂದ್ರ,ಸೂರಜ್,ಸಹಚರರಾದ ಪ್ರೇಮಸಿಂಗ್ ಮತ್ತು ನಯೀಮ್ ಖಾನ್ ಅವರನ್ನು ಪೋಲಿಸರು ಬಂಧಿಸಿದ್ದು,ಪ್ರಿಯಾಂಕಾ ತಲೆಮರೆಸಿಕೊಂಡಿದ್ದಾಳೆ.